ನವದೆಹಲಿ:ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈಗ ವಿಶ್ವದ 15ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅದಾನಿ ಗ್ರೂಪ್ ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಅದಾನಿಯವರ ಸಂಪತ್ತಿಗೆ 12 ಬಿಲಿಯನ್ ಡಾಲರ್ಗಿಂತ ಹೆಚ್ಚು ಮೌಲ್ಯ ಸೇರ್ಪಡೆಯಾಗಿದೆ. ಅದಾನಿ ಗ್ರೂಪ್ ಷೇರುಗಳ ಏರಿಕೆಯ ನಂತರ ನವೆಂಬರ್ನಲ್ಲಿ ಅದಾನಿ ವಿಶ್ವದ ಅಗ್ರ 20 ಶ್ರೀಮಂತರ ಪಟ್ಟಿಯಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅದಾನಿ 82.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 15 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ ಅದಾನಿ ಗ್ರೂಪ್ ಮಾರುಕಟ್ಟೆ ಮಟ್ಟ 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಎಂ ಕ್ಯಾಪ್ನಲ್ಲಿ(ಮಿಡ್ ಕ್ಯಾಪ್) ಕಂಪನಿಯ ಷೇರುಗಳ ಮೌಲ್ಯ 13.8 ಲಕ್ಷ ಕೋಟಿ ರೂ. ಆಗಿದೆ.
ಅದಾನಿ ಸಮೂಹವು ಒಂದೇ ದಿನದಲ್ಲಿ 1.92 ಲಕ್ಷ ಕೋಟಿ ರೂ.ಗಳ ಲಾಭ ಗಳಿಸುವ ಮೂಲಕ ತನ್ನ ಅತ್ಯುತ್ತಮ ಏಕ ದಿನದ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಸಾಧಿಸಿತು. ಅದಾನಿ ಸಮೂಹದ ವಿರುದ್ಧ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್ಬರ್ಗ್ ಮಾಡಿದ ವಂಚನೆಯ ಆರೋಪಗಳನ್ನು ಯುಎಸ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ನಿಜವೆಂದು ಪರಿಗಣಿಸಿಲ್ಲ ಎಂಬ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಅದಾನಿ ಷೇರುಗಳು ಭಾರಿ ಲಾಭ ಗಳಿಸಿದವು. ಶ್ರೀಲಂಕಾದಲ್ಲಿ ಬಂದರು ಯೋಜನೆಗಾಗಿ ದೊಡ್ಡ ಪ್ರಮಾಣದ ಸಾಲ ನೀಡುವ ಮೊದಲು, ಡಿಎಫ್ ಸಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ ಎಂದು ವರದಿಯಾಗಿದೆ.