ನವದೆಹಲಿ:ಭಾರತೀಯ ಕೈಗಾರಿಕೋದ್ಯಮಿ ಮತ್ತು ಬಿಲಿಯನೇರ್ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕುಸಿಯುತ್ತಲೇ ಸಾಗಿದೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಈಗ ಅವರು ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಹಿಂಡೆನ್‌ಬರ್ಗ್ ವರದಿಗಿಂತ ಮೊದಲು ಅವರು ಹೊಂದಿದ್ದ ಮೂರನೇ ಸ್ಥಾನದಿಂದ ಈಗ ಅವರು 7 ನೇ ಸ್ಥಾನಕ್ಕೆ ಜಾರಿದ್ದಾರೆ ಎಂದು ವರದಿಯಾಗಿದೆ. ಅದಾನಿ ಅವರ ಆಸ್ತಿಯ ನಿವ್ವಳ ಮೌಲ್ಯವು ಜನವರಿ 27, 2023 ರ ಹೊತ್ತಿಗೆ 96.5 ಬಿಲಿಯನ್ ಇದೆ( ಭಾರತೀಯ ರೂಪಾಯಿ ಲೆಕ್ಕದಲ್ಲಿ 7 ಲಕ್ಷದ 86 ಸಾವಿರ ಕೋಟಿ ). ಅಂದರೆ ಫೋರ್ಬ್ಸ್ ನೀಡಿರುವ ಅಂಕಿ- ಅಂಶದ ಪ್ರಕಾರ ಸುಮಾರು 22.7 ಶತಕೋಟಿ ಆದಾಯ ಕಡಿಮೆ ಆಗಿದೆಯಂತೆ.
ಕುಸಿತದ ವರದಿ ತಳ್ಳಿ ಹಾಕಿದ ಅದಾನಿ ಗ್ರೂಪ್:ಅದಾನಿ ಗ್ರೂಪ್‌ನ ಷೇರುಗಳು ಶುಕ್ರವಾರವೂ ಕುಸಿತ ಕಂಡವು. ಹಿಂಡೆನ್‌ಬರ್ಗ್ ರಿಸರ್ಚ್ ಪ್ರಕಾರ, ಸೆಕ್ಯುರಿಟಿಗಳಲ್ಲಿ ಸಹ ಅದಾನಿ ಗ್ರೂಪ್ ಕಡಿಮೆ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆದರೆ ಈ ವರದಿಯನ್ನು ಆಧಾರ ರಹಿತ ಎಂದು ಅದಾನಿ ಕಂಪನಿ ತಳ್ಳು ಹಾಕಿದ್ದು, ನ್ಯೂಯಾರ್ಕ್ ಮೂಲದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ನಡುವೆ, ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು ಶೇ 19 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿತ ದಾಖಲಿಸಿವೆ, ಅದಾನಿ ಟೋಟಲ್ ಗ್ಯಾಸ್ 2020 ರ ಮಧ್ಯಭಾಗದ ನಂತರದ ಅತಿದೊಡ್ಡ ದೈನಂದಿನ ಕುಸಿತದಲ್ಲಿ ಶೇ19.1 ರಷ್ಟು ಕುಸಿತ ದಾಖಲಿಸಿದೆಯಂತೆ. ಇನ್ನೊಂದೆಡೆ, ಅದಾನಿ ಗ್ರೀನ್ ಎನರ್ಜಿ BSE ನಲ್ಲಿ ಸುಮಾರು ಶೇ 16 ನಷ್ಟು ಕುಸಿತ ದಾಖಲಿಸಿದೆ ಎಂದು ವರದಿಯಾಗಿದೆ.
ಎಫ್ಪಿಒದಿಂದ 5,985 ಕೋಟಿ ಸಂಗ್ರಹ:ಏತನ್ಮಧ್ಯೆ, ಅದಾನಿ ಎಂಟರ್‌ಪ್ರೈಸಸ್ ಇಂದು ₹ 20,000 ಕೋಟಿ ಫಾಲೋ - ಆನ್ ಸಾರ್ವಜನಿಕ ಕೊಡುಗೆಯನ್ನು (ಎಫ್‌ಪಿಒ) ಪ್ರಾರಂಭಿಸಿದೆ. ಇದು ಸಹ ಕುಸಿತಕ್ಕೊಳಗಾಗಿದೆ. ಇದು ₹ 3,112 ರಿಂದ ₹ 3,276 ರ ಬೆಲೆಯ ಬ್ಯಾಂಡ್‌ನಲ್ಲಿನ ಷೇರುಗಳನ್ನು ಮಾರಾಟ ಮಾಡುತ್ತಿದೆ. ಮತ್ತು ಈ ಸಂಚಿಕೆಯು ಜನವರಿ 31, 2023 ರಂದು ಮುಕ್ತಾಯಗೊಳ್ಳುತ್ತದೆ. ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಂಘಟನೆಯ ಪ್ರಮುಖ ಸಂಸ್ಥೆಯು ಬುಧವಾರ ಹೂಡಿಕೆದಾರರಿಂದ ₹ 5,985 ಕೋಟಿ ಸಂಗ್ರಹಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹಿಂಡನ್ ಬರ್ಗ್ ವರದಿ ವಿರುದ್ಧ ಅದಾನಿ ಗ್ರೂಪ್ ಕೆಂಡಾಮಂಡಲ:ತನ್ನ ಸಮೂಹದಕಂಪನಿಯೊಂದರ ಷೇರು ಮಾರಾಟ ಪ್ರಕ್ರಿಯೆಯನ್ನು ಹಾಳುಮಾಡುವ ಬೇಜವಾಬ್ದಾರಿ ಯತ್ನ ಎಂದು ಅದಾನಿ ಗ್ರೂಪ್ ಆರೋಪಿಸಿದೆ. ‘ಕೆಟ್ಟ ಬುದ್ಧಿಯಿಂದ ಕೂಡಿರುವ ಹಾಗೂ ಅಧ್ಯಯನವನ್ನೇ ನಡೆಸದೆ ಸಿದ್ಧಪಡಿಸಿದ ವರದಿಯು ಅದಾನಿ ಸಮೂಹ, ಅದರ ಹೂಡಿಕೆದಾರರು ಹಾಗೂ ಷೇರುದಾರರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿದೆ. ಇದರಿಂದ ದೇಶದ ಷೇರುಪೇಟೆ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ ಎಂದು ಅದಾನಿ ಸಮೂಹದ ಮುಖ್ಯಸ್ಥ ಜತಿನ್ ಜಲುಂಧ್ವಾಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಮೆರಿಕ ಹಾಗೂ ಭಾರತದ ಕಾನೂನುಗಳ ಅಡಿ ಕ್ರಮ ಜರುಗಿಸುವ ಕುರಿತು ಪರಿಶೀಲನೆ ನಡೆದಿದೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಗೌತಮ್ ಅದಾನಿ ಅದಾನಿ ಗ್ರೂಪ್‌ನ ಸಂಸ್ಥಾಪಕರಾಗಿದ್ದು, ಇದು ಭಾರತದ ಅತಿದೊಡ್ಡ ಪೋರ್ಟ್ ಆಪರೇಟರ್ ಆಗಿದೆ. ಅಷ್ಟೇ ಕಲ್ಲಿದ್ದಲು ಸೇರಿದಂತೆ ಭಾರಿ ಉದ್ಯಮಗಳನ್ನು ನಡೆಸುತ್ತಿದೆ.
ಇದನ್ನು ಓದಿ:ಡಾಲರ್ ಎದುರು ಪಾತಾಳ ಕಂಡ ಪಾಕ್ ರೂಪಾಯಿ!