ನವದೆಹಲಿ:ಹವಾಮಾನ ಮತ್ತು ಪರಿಸರ ರಕ್ಷಣೆಗೆ ಜೈವಿಕ ಇಂಧನದ ಜಾಗತಿಕ ಕೂಟ ರಚನೆಗಾಗಿ ಜಿ-20 ರಾಷ್ಟ್ರಗಳಿಗೆ ಭಾರತ ಶನಿವಾರ ಆಹ್ವಾನ ನೀಡಿದೆ. ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಯ ಮೊದಲ ದಿನದ ಸಭೆಯಲ್ಲಿ ಪರಿಸರ ಸ್ನೇಹಿ ಇಂಧನವಾದ ಎಥೆನಾಲ್ ಹೆಚ್ಚಿನ ಬಳಕೆಗೆ ಆದ್ಯತೆ ನೀಡುವ ಕುರಿತು ಭಾರತ ಪ್ರಸ್ತಾಪ ಮಾಡಿದೆ.
ಭಾರತದಲ್ಲಿ ಪೆಟ್ರೋಲ್ನೊಂದಿಗೆ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣಕ್ಕೆ 2025 ರಲ್ಲಿ ಚಾಲನೆ ನೀಡಲಾಗುವುದು. ಜಾಗತಿಕ ರಾಷ್ಟ್ರಗಳೂ ಪರಿಸರ ಸ್ನೇಹಿ ಇಂಧನ ಬಳಕೆಯ ಒಕ್ಕೂಟಕ್ಕೆ ಸೇರಬೇಕಿದೆ. ಭಾರತ ಈ ಕುರಿತು ಹೆಜ್ಜೆ ಇಟ್ಟಾಗಿದೆ ಎಂದು ಪ್ರಧಾನಿ ಮೋದಿ ಅವರು ಜಾಗತಿಕ ನಾಯಕರ ಗಮನಕ್ಕೆ ತಂದರು.
ಎಥೆನಾಲ್ ಹೆಚ್ಚಿನ ಬಳಕೆಗೆ ಕರೆ:ಜಿ 20 ಶೃಂಗಸಭೆಯಲ್ಲಿ 'ಒಂದು ಭೂಮಿ' ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಜೈವಿಕ ಇಂಧನ ಮೈತ್ರಿಕೂಟವನ್ನು ಶನಿವಾರ ಘೋಷಿಸಲಾಗಿದೆ. ಇದರ ಸಹಭಾಗಿತ್ವಕ್ಕೆ ಎಲ್ಲ ರಾಷ್ಟ್ರಗಳಿಗೂ ಆಹ್ವಾನವಿದೆ. ಇಂಧನ ಮಿಶ್ರಣ ಕ್ಷೇತ್ರದಲ್ಲಿ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಕ್ರಮವನ್ನ ವಿಶ್ವದ ಎಲ್ಲ ರಾಷ್ಟ್ರಗಳು ಮಾಡಬೇಕಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ ಎಥೆನಾಲ್ ಬದಲಿಗೆ ಮತ್ತೊಂದು ಪರಿಸರ ಸ್ನೇಹಿ ಇಂಧನ ಬಳಕೆಯನ್ನೂ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಿದೆ. ಇದು ಸ್ಥಿರವಾದ ಇಂಧನ ಪೂರೈಕೆಯನ್ನು ಖಾತ್ರಿಪಡಿಸುತ್ತದೆ. ಹವಾಮಾನ ಭದ್ರತೆಗೂ ಇದು ಕೊಡುಗೆ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯಾ ಅಧ್ಯಕ್ಷರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಮುಂದೆ ಪ್ರಧಾನಿ ಮೋದಿ ಪ್ರಸ್ತಾಪ ಸಲ್ಲಿಸಿದರು.
ಇಂಧನ ಒಕ್ಕೂಟ:2009 ರಲ್ಲಿ ಅಮೆರಿಕದ ಕೋಪನ್ ಹ್ಯಾಗನ್ನಲ್ಲಿ ನಡೆದ ಹವಾಮಾನ ಕುರಿತ ಸಭೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾವಣೆಯನ್ನು ಎದುರಿಸಲು 2020 ರ ವೇಳೆಗೆ ಪ್ರತಿ ವರ್ಷಕ್ಕೆ 100 ಬಿಲಿಯನ್ ಅಮೆರಿಕನ್ ಡಾಲರ್ ನೀಡಲು ಸಿದ್ಧ ಎಂದು ಸಾರಿದ್ದವು. ಆದರೂ, ಶ್ರೀಮಂತ ರಾಷ್ಟ್ರಗಳು ಈ ಬದ್ಧತೆಯನ್ನು ಪೂರೈಸಲು ವಿಫಲವಾಗಿವೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ಜೈವಿಕ ಇಂಧನ ಒಕ್ಕೂಟ ರಚನೆಯನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದೆ. ಇದಕ್ಕೂ ಮೊದಲು 2015 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಎಲ್ಲರಿಗೂ ಕೈಗೆಟುಕುವ ಜೈವಿಕ ಇಂಧನ ಕುರಿತ ಮೈತ್ರಿಕೂಟವನ್ನು ಭಾರತ ರಚಿಸಿತ್ತು.
ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, 2050 ರ ವೇಳೆಗೆ ಶೂನ್ಯ ಮಾಲಿನ್ಯದ ಗುರಿಯನ್ನು ಸಾಧಿಸಬೇಕಾದರೆ, 2030 ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಜೈವಿನ ಇಂಧನ ಉತ್ಪಾದನೆಯು ಮೂರು ಪಟ್ಟು ಹೆಚ್ಚಬೇಕು ಎಂದಿದೆ. ಭಾರತವು 2070 ರ ಹೊತ್ತಿಗೆ ಶೂನ್ಯ ಇಂಗಾಲ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಜೈವಿನ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು ಮುಂದಾಗಿದೆ. ಹೀಗಾಗಿ 2025 ರಲ್ಲಿ ಪೆಟ್ರೋಲ್ನಲ್ಲಿ ಜೈವಿಕ ಇಂಧನವನ್ನು ಶೇಕಡಾ 20 ರಷ್ಟನ್ನು ಮಿಶ್ರಣ ಮಾಡುವ ಉದ್ದೇಶ ಹೊಂದಿದೆ. (ಪಿಟಿಐ)
ಇದನ್ನೂ ಓದಿ:73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ