ನವದೆಹಲಿ:ಭಾರತೀಯ ನೌಕಾಪಡೆಗೆ 26 ರಫೇಲ್ ಮೆರೈನ್ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ಭಾರತ ಒಪ್ಪಿಗೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಒಪ್ಪಂದದ ಕುರಿತು ಚರ್ಚಿಸಲು ಫ್ರಾನ್ಸ್ ರಕ್ಷಣಾ ಸಚಿವಾಲಯದ ಅಧಿಕಾರಿಗಳ ನೇತೃತ್ವದ ತಂಡವು ಭಾರತಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದೆ. ಕಳೆದ ವಾರ ಇಂತಹದ್ದೊಂದು ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.
ಭಾರತ ಪ್ರವಾಸ ಕೈಗೊಂಡಿದ್ದ ಫ್ರೆಂಚ್ ತಂಡದ ನೇತೃತ್ವವನ್ನು ಜನರಲ್ ಆಫ್ ಆರ್ಮಮೆಂಟ್‌ನ ಏಷ್ಯಾದ ಉಸ್ತುವಾರಿ ವಹಿಸಿರುವ ಅಧಿಕಾರಿಯೊಬ್ಬರು ವಹಿಸಿಕೊಂಡಿದ್ದರು. ಇವರ ನೇತೃತ್ವದಲ್ಲಿಯೇ ಈ ಸಭೆ ನಡೆದಿದೆ. ಫ್ರೆಂಚ್ನ ಈ ನಿಯೋಗದೊಂದಿಗೆ ಭಾರತೀಯ ನೌಕಾಪಡೆಯ ಇಬ್ಬರು ಉನ್ನತ ಅಧಿಕಾರಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ಭಾರತೀಯ ಪ್ರಮುಖ ಸುದ್ದಿಸಂಸ್ಥೆ ವರದಿ ಮಾಡಿದೆ.
2016 ರಲ್ಲಿ ನಡೆದ ಒಪ್ಪಂದದ ವೇಳೆ ನಡೆದ ಮಾತುಕತೆಯಂತೆಯೆ ಇಲ್ಲೂ ಅದೇ ನಿಯಮಾವಳಿಗಳ ಅನ್ವಯ ಸಮಾಲೋಚನೆಗೆ ತಂಡವನ್ನು ರಚನೆ ಮಾಡಬೇಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ಅಂಗೀಕರಿಸಿದ ನಂತರ ಭಾರತವು ಅಧಿಕೃತವಾಗಿ 26 ರಫೇಲ್ ನೌಕಾಪಡೆಗಳನ್ನು ಖರೀದಿಸುವ ಯೋಜನೆಯನ್ನು ಘೋಷಿಸಿದೆ. ಹೊಸ ಒಪ್ಪಂದ ಮಾಡಿಕೊಳ್ಳಲು ಭಾರತದ ಕಡೆಯಿಂದ ಪ್ರಸ್ತಾವನೆ ಸಲ್ಲಿಸಲು ಫ್ರೆಂಚ್ ಸರ್ಕಾರಕ್ಕೆ ವಿನಂತಿ ಪತ್ರವನ್ನ ಕಳುಹಿಸಬೇಕಾಗಿದೆ. ಹೊಸ ಒಪ್ಪಂದಕ್ಕಾಗಿ ನಡೆಯುವ ಚರ್ಚಾ ವಿಷಯಗಳ ಪಟ್ಟಿ ರೆಡಿ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.