ನವದೆಹಲಿ:2023 ನೇ ಸಾಲಿನ ವಿಶ್ವದ ಶ್ರೀಮಂತ ವ್ಯಕ್ತಿಗಳನ್ನು ಫೋರ್ಬ್ಸ್ ಪಟ್ಟಿ ಮಾಡಿದೆ. ಇದು ಫೋರ್ಬ್ಸ್‌ನ 37 ನೇ ವಾರ್ಷಿಕ ಪಟ್ಟಿಯಾಗಿದ್ದು, ಅದರಲ್ಲಿ ಭಾರತದ ಉದ್ಯಮಿ, ರಿಲಯನ್ಸ್ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಟಾಪ್ 9ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ವಿಶ್ವದಲ್ಲಿಯೇ 2ನೇ ಧನಿಕರಾಗಿದ್ದ ಅದಾನಿ ಗ್ರೂಪ್ನ ಗೌತಮ್ ಅದಾನಿ ಅವರು 24 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆಯ ಆರೋಪಿತ ವರದಿಯ ಬಳಿಕ ಅದಾನಿ ಗ್ರೂಪ್ ಮೌಲ್ಯ ತೀವ್ರ ಕುಸಿತ ಕಂಡಿರುವುದೇ ಇದಕ್ಕೆ ಕಾರಣ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ವಿಶ್ವದ ಟಾಪ್ 10 ರೊಳಗೆ ಸ್ಥಾನ ಪಡೆಯುವುದರ ಜೊತೆಗೆ ಏಷ್ಯಾದಲ್ಲಿಯೇ ನಂಬರ್ 1 ಶ್ರೀಮಂತ ವ್ಯಕ್ತಿ ಪಟ್ಟವನ್ನು ಉಳಿಸಿಕೊಂಡರು. ಅಂಬಾನಿ ಅಂದಾಜು ನಿವ್ವಳ ಮೌಲ್ಯ 83.4 ಬಿಲಿಯನ್ ಡಾಲರ್ ಆಗಿದೆ.
ಅಂಬಾನಿ ಕಳೆದ ವರ್ಷ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದರು. ಅಜಮಾಸು 90.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದರು. ಈ ವರ್ಷ ಮೌಲ್ಯದಲ್ಲಿ ಇಳಿಕೆ ಕಂಡರೂ ಟಾಪ್ 9 ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಶ್ರೀಮಂತರ ಆದಾಯವೂ ಇಳಿಕೆಯಾಗಿದ್ದು, ಇದಕ್ಕೆ ಕಾರಣವಾಗಿದೆ. ಇದಲ್ಲದೇ, ಮೈಕ್ರೋಸಾಫ್ಟ್‌ನ ಸ್ಟೀವ್ ಬಾಲ್ಮರ್, ಲ್ಯಾರಿ ಪೇಜ್ ಮತ್ತು ಗೂಗಲ್‌ನ ಸೆರ್ಗೆ ಬ್ರಿನ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಡೆಲ್ ಟೆಕ್ನಾಲಜೀಸ್‌ನ ಮೈಕೆಲ್ ಡೆಲ್ ಅವರಿಗಿಂತ ಅಂಬಾನಿ ಉನ್ನತ ಸ್ಥಾನದಲ್ಲಿದ್ದಾರೆ.
ಅದಾನಿ ತೀವ್ರ ಇಳಿಕೆ:ಇನ್ನೊಂದೆಡೆ, ಕಳೆದ ವರ್ಷ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಪಟ್ಟ ಧರಿಸಿದ್ದ ಅದಾನಿ ಗ್ರೂಪ್ನ ಗೌತಮ್ ಅದಾನಿ ಈ ವರ್ಷ 24 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಿಂಡನ್ಬರ್ಗ್ ವರದಿಯ ಬಳಿಕ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತದ ನಂತರ ಜಾಗತಿಕ ಧನಿಕರ ಪಟ್ಟಿಯಲ್ಲಿ ಇಳಿಕೆ ದಾಖಲಿಸಿದ್ದಾರೆ. ಅವರ ನಿವ್ವಳ ಮೌಲ್ಯವು 47.2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯರ ಪೈಕಿ 2 ನೇ ಸ್ಥಾನ ಪಡೆದಿದ್ದಾರೆ.ಇನ್ನು, ಹೆಚ್ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡಾರ್ ಅವರು 25.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದುವ ಮೂಲಕ ವಿಶ್ವದ 55 ನೇ, ಭಾರತದ 3ನೇ ಧನಿಕ ಸ್ಥಾನದಲ್ಲಿದ್ದಾರೆ.