ನ್ಯೂಯಾರ್ಕ್:ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಮಹಿಳಾ ಧನಿಕರ ಪಟ್ಟಿಯಲ್ಲಿ ಭಾರತೀಯ ಸಂಜಾತ ಅಮೆರಿಕನ್ನರಾದ ನಾಲ್ವರು ನಾರಿಯರು ಸ್ಥಾನ ಪಡೆದಿದ್ದಾರೆ. ಅಮೆರಿಕದ 100 ಅತ್ಯಂತ ಯಶಸ್ವಿ ಉದ್ಯಮಿಗಳು, ಸಿಇಒ ಮತ್ತು ಎಂಟರ್ಟೈನ್ಮೆಂಟ್ ಮಹಿಳೆಯರಲ್ಲಿ ಜಯಶ್ರೀ ಉಲ್ಲಾಲ್, ನೀರ್ಜಾ ಸೇಥಿ, ನೇಹಾ ನಾರ್ಖೆಡೆ ಮತ್ತು ಇಂದಿರಾ ನೂಯಿ ಅವರಿದ್ದಾರೆ.
ಕಂಪ್ಯೂಟರ್ ನೆಟ್‌ವರ್ಕಿಂಗ್ ಕಂಪನಿ ಅರಿಸ್ಟಾ ನೆಟ್‌ವರ್ಕ್‌ನ ಸಿಇಒ ಜಯಶ್ರೀ ಉಲ್ಲಾಲ್(62) ದಾಖಲೆಯ 4.4 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಭಾರತೀಯ-ಅಮೆರಿಕನ್ನರ ಪಟ್ಟಿಯಲ್ಲಿ 15 ನೇ ಸ್ಥಾನ ಪಡೆದಿದ್ದಾರೆ. 2022 ರಲ್ಲಿ ಅವರ ಆಸ್ತಿ ಶೇಕಡಾ 12 ರಷ್ಟು ವೃದ್ಧಿಯಾಗಿತ್ತು. 2008 ರಲ್ಲಿ ಅವರು ಕಂಪನಿಯ ಸಿಇಒ ಆದ ನಂತರ ಕಂಪನಿಯು ಸತತ ಲಾಭ ಗಳಿಸುತ್ತಿದೆ. ಘಟಕಗಳ ಕೊರತೆ ಮತ್ತು ಪೂರೈಕೆ ಸವಾಲುಗಳ ಹೊರತಾಗಿಯೂ ಕಳೆದ ವರ್ಷಕ್ಕಿಂತ 48 ಪ್ರತಿಶತದಷ್ಟು ಆಸ್ತಿ ಹೆಚ್ಚಿದೆ ಎಂದು ಫೋರ್ಬ್ಸ್ ಹೇಳಿದೆ.
ಇನ್ನು ಇದೇ ಪಟ್ಟಿಯಲ್ಲಿರುವ ನೀರ್ಜಾ ಸೇಥಿ (68) ಅವರು 990 ಮಿಲಿಯನ್ ಆಸ್ತಿಯೊಂದಿಗೆ 25 ನೇ ಸ್ಥಾನದಲ್ಲಿದ್ದಾರೆ. 1980 ರಲ್ಲಿ ಪತಿ ಭರತ್ ದೇಸಾಯಿ ಅವರೊಂದಿಗೆ ಆರಂಭಿಸಿರುವ ಐಟಿ ಸಲಹಾ ಮತ್ತು ಹೊರಗುತ್ತಿಗೆ ಸಂಸ್ಥೆಯಾದ ಸಿಂಟೆಲ್ನ ಸಹ ಸಂಸ್ಥಾಪಕರಾಗಿದ್ದಾರೆ. 2018 ರಲ್ಲಿ ಅವರು ಅದನ್ನು ಫ್ರೆಂಚ್ ಐಟಿ ಸಂಸ್ಥೆ ಅಟೋಸ್ ಎಸ್‌ಇಗೆ 3.4 ಬಿಲಿಯನ್‌ಗೆ ಮಾರಾಟ ಮಾಡಿದ್ದಾರೆ.