ನವದೆಹಲಿ: ಮುಂಬರುವ ಹಬ್ಬದ ಸೀಸನ್ನಲ್ಲಿ ಎಲ್ಲಾ ಪ್ರಮುಖ ಆಹಾರ ಪದಾರ್ಥಗಳು ಮತ್ತು ಸರಕುಗಳ ಬೆಲೆಗಳು ಸ್ಥಿರವಾಗಿರುತ್ತವೆ ಎಂದು ಸರ್ಕಾರ ಗುರುವಾರ ಭರವಸೆ ನೀಡಿದೆ. ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಲಭ್ಯವಿರುವ ಎಲ್ಲಾ ಸಾಧನಗಳನ್ನು ಬಳಸುತ್ತಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಧ್ಯಮಗಳಿಗೆ ತಿಳಿಸಿದರು.
ಗೋಧಿ, ಅಕ್ಕಿ, ಖಾದ್ಯ ತೈಲಗಳು ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳ ಬೆಲೆಗಳು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಳೆದ ಕೆಲ ತಿಂಗಳುಗಳಲ್ಲಿ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಸಕ್ಕರೆ ಬೆಲೆಗಳು ಭಾರತದಲ್ಲಿ ಪ್ರತಿ ಕೆ.ಜಿ.ಗೆ 44 ರೂ. ಇದ್ದು, ವಿದೇಶಗಳಿಗೆ ಹೋಲಿಸಿದರೆ ಸಾಕಷ್ಟು ಅಗ್ಗವಾಗಿದೆ. ಆದರೆ ದೇಶದಲ್ಲಿ ಸಾಕಷ್ಟು ಸಕ್ಕರೆ ಲಭ್ಯವಾಗುವಂತೆ ನೋಡಿಕೊಳ್ಳಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಅಕ್ಕರೆ ರಫ್ತಿನ ಮೇಲಿನ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಜಾರಿಯಲ್ಲಿರುತ್ತವೆ ಎಂದು ಚೋಪ್ರಾ ಹೇಳಿದರು.
ಸಕ್ಕರೆ ಬೆಲೆಗಳು ಸ್ಥಿರವಾಗಿರುವುದರಿಂದಲೇ 2022-23ನೇ ಸಾಲಿನಲ್ಲಿ ರೈತರಿಗೆ ಕಬ್ಬಿನ ಬಾಕಿಯನ್ನು ಶೇಕಡಾ 95 ರಷ್ಟು ಪಾವತಿಸಲು ಸಾಧ್ಯವಾಗಿದೆ. ಕಡಲೆಕಾಯಿ ಎಣ್ಣೆ ಹೊರತುಪಡಿಸಿ, ಖಾದ್ಯ ತೈಲ ಬೆಲೆಗಳು ಸಹ ಕಳೆದೊಂದು ವರ್ಷದಿಂದ ಕಡಿಮೆಯಾಗಿವೆ ಎಂದು ಅವರು ತಿಳಿಸಿದರು. ದೇಶೀಯ ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರತೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪಾರ್ಬಾಯಿಲ್ಡ್ ಅಕ್ಕಿಯ ಮೇಲಿನ ಶೇಕಡಾ 20 ರಷ್ಟು ರಫ್ತು ಸುಂಕವನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಚೋಪ್ರಾ ಹೇಳಿದರು.