ಹೈದರಾಬಾದ್: ಷೇರು ಮಾರುಕಟ್ಟೆಯು ಹಲವಾರು ಏರಿಳಿತಗಳನ್ನು ಕಾಣುತ್ತಿರುತ್ತದೆ. ಆದರೂ ಕೂಡಾ ಹೂಡಿಕೆಗೆ ಇದು ಅತ್ಯಂತ ಉತ್ತಮವಾದ ಆಯ್ಕೆಯಾಗಿದೆ. ಒಮ್ಮೊಮ್ಮೆ ಕುಸಿದರೂ, ಒಂದಲ್ಲಾ ಒಂದು ಬಾರಿ ಚೇತರಿಕೆ ಕಂಡು ಲಾಭಾಂಶ ಪಡೆಯಲು ಸಾಧ್ಯವಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಷೇರು ಮಾರುಕಟ್ಟೆ ಮೇಲೆ ಸಾಕಷ್ಟು ಪ್ರಭಾವ ಬೀರಲಾಗಿತ್ತು. ಆದರೆ, ಈಗ ಉಕ್ರೇನ್ ಮತ್ತು ರಷ್ಯಾ ಯುದ್ಧ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ಬಾರಿ ನಷ್ಟಕ್ಕೆ ಒಳಗಾದಾಗ ಧೃತಿಗೆಡದೇ ಹೂಡಿಕೆಯನ್ನು ಮುಂದುವರೆಸಿದರೆ, ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಷೇರು ಮಾರುಕಟ್ಟೆಯ ಮೇಲೆ ಸಾಂಕ್ರಾಮಿಕ ರೋಗಗಳು, ಆರ್ಥಿಕ ದುಃಸ್ಥಿತಿ, ರಾಜಕೀಯ ಮುಂತಾದ ವಿಚಾರಗಳು ಪರಿಣಾಮ ಬೀರುತ್ತವೆ. ಅವುಗಳಲ್ಲಿನ ಒಳ್ಳೆಯ ಅಂಶಗಳೂ ಇರುತ್ತವೆ, ಕೆಟ್ಟ ಅಂಶಗಳೂ ಇರುತ್ತವೆ. ನಾವು ತಾತ್ಕಾಲಿಕವಾಗಿ ಹೂಡಿಕೆಗಳನ್ನು ಕಳೆದುಕೊಂಡರೂ, ದೀರ್ಘಾವಧಿಯಲ್ಲಿ ಮತ್ತೆ ಜೀವಮಾನದ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯುದ್ಧದ ಭಯ ಮತ್ತು ಇತರ ವಿಚಾರಗಳ ಕುರಿತು ನಾವು ಯೋಚಿಸಿದರೂ, ಷೇರು ಮಾರುಕಟ್ಟೆಯ ಹೂಡಿಕೆ ವಿಚಾರವಾಗಿ ಸಕಾರಾತ್ಮಕ ಮನೋಭಾವ ಹೊಂದಿರಬೇಕು.
ಕೆಂಪು ಬಣ್ಣ ಶಾಶ್ವತವಲ್ಲ:ಮಾರುಕಟ್ಟೆ ಅಸ್ಥಿರವಾಗಿರುವುದು ಸಂಪೂರ್ಣ ಸತ್ಯ. ಆದರೆ ಹೂಡಿಕೆಗಳನ್ನು ಹಿಂತೆಗೆದುಕೊಳ್ಳಲು ಇದೊಂದೇ ಕಾರಣವಾಗಬಾರದು. ಹೂಡಿಕೆ ಮಾಡುವಾಗ ವಿಷಯಗಳಿಗೆ ಸಿದ್ಧರಾಗಿರಲು ಮರೆಯಬಾರದು. ನಿಮ್ಮ ಗುರಿಯನ್ನು ಸಾಧಿಸಲು ಬಲವಾದ ಕಾರಣವಿದ್ದರೆ ಹೂಡಿಕೆಗಳನ್ನು ಹಿಂಪಡೆಯಬೇಕು. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್‌ನಲ್ಲಿನ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದರೆ ಹೊರಬರಬಹುದು. ಇದಲ್ಲದೆ, ಸಣ್ಣ ಕಾರಣಗಳಿಗಾಗಿ ಷೇರುಗಳನ್ನು ಹಿಂತೆಗೆದುಕೊಳ್ಳಬಾರದು. ಡಿಮ್ಯಾಟ್ ಖಾತೆಯಲ್ಲಿನ ಹೂಡಿಕೆಗಳು ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡರೆ ಆ ಕೆಂಪು ಬಣ್ಣ ಶಾಶ್ವತವಾಗಿ ಉಳಿಯುತ್ತದೆ ಎಂದು ಅರ್ಥವಲ್ಲ. ಒಂದು ವೇಳೆ ನೀವು ಭಯಪಟ್ಟರೆ, ಲಾಭವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ, ಗುರಿಗಳನ್ನು ಸಾಧಿಸುವವರೆಗೆ ಹೂಡಿಕೆಯನ್ನು ಮುಂದುವರಿಸಬೇಕು.