ಕರ್ನಾಟಕ

karnataka

ETV Bharat / business

ಹಣ ಉಳಿಯತಾಯಕ್ಕೆ ಸ್ಥಿರ ಠೇವಣಿ ಉತ್ತಮ: ಶೇ.9 ರಷ್ಟು ಬಡ್ಡಿದರ ಎಲ್ಲಿ ಸಿಗುತ್ತೆ ಗೊತ್ತಾ? - ಸ್ಥಿರ ಠೇವಣಿ

ಹಣದ ಉಳಿತಾಯ ಮಾಡಬೇಕೆಂದಲ್ಲಿ ಎಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಎಂಬುದು ಬಹುಮುಖ್ಯ. ಸ್ಥಿರ ಠೇವಣಿ ಮಾಡಬೇಕಾದರೂ ಅದರಲ್ಲಿ ಬ್ಯಾಂಕ್​, ಬಡ್ಡಿದರ ಮತ್ತು ಅವಧಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಬೇಕು.

ಹಣ ಉಳಿಯತಾಯಕ್ಕೆ ಸ್ಥಿರ ಠೇವಣಿ ಉತ್ತಮ
ಹಣ ಉಳಿಯತಾಯಕ್ಕೆ ಸ್ಥಿರ ಠೇವಣಿ ಉತ್ತಮ

By

Published : Apr 29, 2023, 2:38 PM IST

ಒಮ್ಮೊಮ್ಮೆ ನಮ್ಮ ಹೂಡಿಕೆ ಕೈ ಕೊಡುವ ಸಾಧ್ಯತೆ ಇರುತ್ತದೆ. ಅದೆಲ್ಲದಕ್ಕೂ ಸಜ್ಜಾಗಿರಬೇಕು. ಇದೆಲ್ಲಾ ಬೇಡ, ಹಣ ವಾಪಸ್​ ಬರುವ ಪಕ್ಕಾ ಯೋಜನೆ ಬೇಕೆಂದರೆ, ಅದಕ್ಕಾಗಿ ಸ್ಥಿರ ಠೇವಣಿ(ಫಿಕ್ಸಡ್​ ಡೆಪಾಸಿಟ್​) ಉತ್ತಮ ಆಯ್ಕೆ. ಆದರೆ, ಈ ಮಧ್ಯೆ ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಹಣದುಬ್ಬರ ತಡೆಯಲು ಬಡ್ಡಿದರ ಹೆಚ್ಚಳ, ಇಳಿಕೆ ಮಾಡುತ್ತಿದೆ. ಬಡ್ಡಿದರ ಕಡಿತವಾದಾಗ ಜನರು ಎಫ್​ಡಿಗಳಿಗೆ ಪರ್ಯಾಯ ಹುಡುಕುತ್ತಾರೆ. ಇದರಿಂದ ಬ್ಯಾಂಕ್‌ಗಳು ನಗದು ಕೊರತೆ ಎದುರಿಸುತ್ತಿವೆ. ಇದನ್ನು ತಡೆಯಲು ಕೆಲ ಬ್ಯಾಂಕ್​ಗಳು ಉತ್ತಮ ಬಡ್ಡಿದರ ನೀಡಲು ಮುಂದಾಗಿವೆ. ಶೇ.9 ಕ್ಕಿಂತ ಹೆಚ್ಚು ಬಡ್ಡಿಯನ್ನು ನಿಗದಿತ ಅವಧಿಗೆ ನೀಡಲಾಗುತ್ತಿದೆ. ಯಾವೆಲ್ಲಾ ಬ್ಯಾಂಕ್​ಗಳು, ಎಷ್ಟು ಇಂಟ್ರೆಸ್ಟ್​ ನೀಡುತ್ತಿವೆ ಎಂಬುದು ಈ ಮುಂದಿದೆ.

ಬಡ್ಡಿದರಗಳು ಹೆಚ್ಚುತ್ತಿರುವ ಕಾರಣ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯೂ ಹೆಚ್ಚಾಗಿದೆ. ವರ್ಷದ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗರಿಷ್ಠ 5.5 ಶೇಕಡಾ ಬಡ್ಡಿ ದರವನ್ನು ನೀಡಿತ್ತು. ಈಗ ಅದು ಶೇ.7.10ಕ್ಕೆ ತಲುಪಿದೆ. ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಬ್ಯಾಂಕ್ ಕೂಡ ಶೇ.7.1 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ 7.2 ರಷ್ಟು ಬಡ್ಡಿ ನೀಡುತ್ತಿವೆ. ಅದರಲ್ಲೂ ಹಿರಿಯ ನಾಗರಿಕರಿಗೆ ಶೇಕಡಾ 0.50 ಹೆಚ್ಚಿನ ಬಡ್ಡಿ ಕೊಡ್ತಿವೆ. ಯೆಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 8.51 ರವರೆಗೆ ಬಡ್ಡಿ ನೀಡುವುದಾಗಿ ಘೋಷಿಸಿದೆ.

ಹೆಚ್ಚಿನ ಬಡ್ಡಿ ಎಲ್ಲೆಲ್ಲಿ?:ಹೊಸ ತಲೆಮಾರಿನ ಸಣ್ಣ ಹಣಕಾಸು ಬ್ಯಾಂಕ್‌ಗಳು (ಎಸ್​ಎಫ್​ಬಿ) ದೊಡ್ಡ ಬ್ಯಾಂಕ್‌ಗಳೊಂದಿಗೆ ಸ್ಪರ್ಧಿಸಲು ಬಡ್ಡಿದರಗಳನ್ನು ತುಸು ಹೆಚ್ಚಾಗಿಯೇ ಏರಿಸಿವೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 999 ದಿನಗಳ ಅವಧಿಗೆ 9.05 ಶೇಕಡಾ (ವಾರ್ಷಿಕ ಅವಧಿಗೆ) ಬಡ್ಡಿದರವನ್ನು ನೀಡುತ್ತಿದೆ. ಉಜ್ಜೀವನ್ 559 ದಿನಗಳ ಠೇವಣಿಯ ಮೇಲೆ ಶೇಕಡಾ 8.20 ಮತ್ತು 560 ದಿನಗಳ ಠೇವಣಿಯ ಮೇಲೆ ಶೇಕಡಾ 8.45 ನೀಡುತ್ತಿದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1001 ದಿನಗಳ ಅವಧಿಗೆ 9.5 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಇದಲ್ಲದೇ, ಬಡ್ಡಿಯನ್ನು ಮಾಸಿಕವಾಗಿ ಠೇವಣಿದಾರರಿಗೆ ಪಾವತಿಸುವುದಾಗಿ ಹೇಳುತ್ತಿವೆ.

181 ರಿಂದ 201 ದಿನಗಳು ಮತ್ತು 501 ದಿನಗಳವರೆಗೆ 9.25 ಪ್ರತಿಶತ ಬಡ್ಡಿ ನೀಡುತ್ತಿವೆ. ಈಕ್ವಿಟಾಸ್​ 888 ದಿನಗಳವರೆಗೆ 8.50 ಶೇಕಡಾ ಬಡ್ಡಿಯನ್ನು ಪಾವತಿಸುತ್ತಿದೆ. ಇದಲ್ಲದೇ, ಇತರ ಸಣ್ಣ ಹಣಕಾಸು ಬ್ಯಾಂಕ್‌ಗಳು ವಿವಿಧ ಅವಧಿಗಳಿಗೆ ಶೇಕಡಾ 8 ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ. ಫಿನ್​ಕೇರ್​ ಎಸ್​ಎಫ್​ಬಿ ಹಿರಿಯ ನಾಗರಿಕರಿಗೆ 750 ದಿನಗಳ ಅವಧಿಗೆ 8.71 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ನೆನಪಿಡಬೇಕಾದ ಒಂದು ವಿಷಯವೆಂದರೆ ಸಣ್ಣ ಹಣಕಾಸು ಬ್ಯಾಂಕ್‌ಗಳು ಡಿಐಸಿಜಿಸಿಯಿಂದ ರೂ.5 ಲಕ್ಷಕ್ಕಿಂತ ಕಡಿಮೆ ಠೇವಣಿಗಳಿಗೆ ವಿಮಾ ರಕ್ಷಣೆಯನ್ನು ಹೊಂದಿವೆ.

ಅವಧಿ ಬಗ್ಗೆ ಜಾಗ್ರತೆಯಿರಲಿ:ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳು ಆಯ್ಕೆಮಾಡಿದ ಅವಧಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಬ್ಯಾಂಕುಗಳು ಎಲ್ಲಾ ಅವಧಿಯ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿಲ್ಲ. ಆದ್ದರಿಂದ, ಅವಧಿಯನ್ನು ಆಯ್ಕೆ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಬ್ಯಾಂಕುಗಳು 1 ವರ್ಷ, ಎರಡು ವರ್ಷ ಮತ್ತು ಮೂರು ವರ್ಷಗಳ ಠೇವಣಿಗಳ ಮೇಲೆ ಗರಿಷ್ಠ ಬಡ್ಡಿಯನ್ನು ನೀಡುತ್ತವೆ. ಆದ್ದರಿಂದ, ಠೇವಣಿಯ ಅವಧಿಯನ್ನು ಅವಶ್ಯಕತೆಗೆ ಅನುಗುಣವಾಗಿ ನಿರ್ಧರಿಸಬೇಕು.

1 ವರ್ಷದ ಅವಧಿಗೆ ಬ್ಯಾಂಕ್ ಗರಿಷ್ಠ ಬಡ್ಡಿಯನ್ನು ಪಾವತಿಸುತ್ತಿದ್ದರೆ, ನೀವು ಅದರಲ್ಲಿ ಎಫ್‌ಡಿ ಮಾಡಬಹುದು. ಅದು ಸ್ವಯಂ ಆಗಿ ನವೀಕರಣ ಹೊಂದುವಂತಹ ಸೌಲಭ್ಯವನ್ನು ಆಯ್ಕೆ ಮಾಡಬೇಡಿ. ಕಾರಣ ಬಡ್ಡಿದರ ಪರಿಶೀಲನೆ, ಅದೇ ಬ್ಯಾಂಕಲ್ಲಿ ಮುಂದುವರಿಯಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಬಹುದಾಗಿದೆ. 2 ವರ್ಷಗಳವರೆಗೆ ಹಣದ ಅಗತ್ಯವಿಲ್ಲದಿದ್ದರೆ ಶೇ.8ಕ್ಕಿಂತ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಬ್ಯಾಂಕ್​ಗಳ ಬದಲಿಸಿ:ದೊಡ್ಡ ಮೊತ್ತದ ನಿಶ್ಚಿತ ಠೇವಣಿ ಇಡಲು ಬಯಸಿದಲ್ಲಿ ವರ್ಷವೂ ಬ್ಯಾಂಕ್​ಗಳನ್ನು ಬದಲಿಸಿ. ಹೆಚ್ಚಿನ ಬಡ್ಡಿ ನೀಡುವ ಒಂದು ಬ್ಯಾಂಕ್‌ನಲ್ಲಿ ಒಂದು ವರ್ಷ, ಇನ್ನೊಂದು ಬ್ಯಾಂಕ್‌ನಲ್ಲಿ ಎರಡು ವರ್ಷ ಮತ್ತು ಮತ್ತೊಂದು ಬ್ಯಾಂಕ್‌ನಲ್ಲಿ ಮೂರು ವರ್ಷ ಠೇವಣಿ ಇಡಬಹುದು. ಒಂದೇ ಬ್ಯಾಂಕಿನಲ್ಲಿ ಉಳಿಯುವ ಬದಲು, ವಿವಿಧ ಅವಧಿಗಳಿಗೆ ವಿವಿಧ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿ. ಇದರಿಂದ ಆದಾಯವೂ ಹೆಚ್ಚುತ್ತದೆ. ಸರ್ಕಾರಿ, ಖಾಸಗಿ ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳ ಬಗ್ಗೆ ಅರಿತಿರಿ. 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಇಡಬೇಕಾದಲ್ಲಿ ಸರ್ಕಾರಿ ಬ್ಯಾಂಕ್‌ಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ ವಿಧಾನವಾಗಿದೆ.

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ:ಕೆಲವು ಬ್ಯಾಂಕುಗಳು ವಿಶೇಷ ಠೇವಣಿಗಳನ್ನು ನೀಡುತ್ತವೆ. ಅವಧಿ ಮುಗಿದಿದ್ದರೂ ಇವುಗಳನ್ನು ಇನ್ನೂ ಕೆಲ ಕಾಲ ವಿಸ್ತರಿಸಿರುವುದು ಗಮನಾರ್ಹ. ಇದರಲ್ಲಿ, ಎಸ್‌ಬಿಐ ಅಮೃತ್ ಕಲಾಶ್ ನೀಡುವ 400 ದಿನಗಳ ವಿಶೇಷ ಠೇವಣಿಯಲ್ಲಿ ಹಿರಿಯ ನಾಗರಿಕರು ಶೇಕಡಾ 7.6 ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದು ಜೂನ್ 30 ರವರೆಗೆ ಲಭ್ಯವಿರುತ್ತದೆ. ಐಡಿಬಿಐ ಬ್ಯಾಂಕ್ ಅಮೃತ್ ಮಹೋತ್ಸವ ಎಫ್‌ಡಿಯನ್ನು 444 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಶೇಕಡಾ 7.65 ಬಡ್ಡಿಯಲ್ಲಿ ನೀಡುತ್ತಿದೆ. ಇಂಡಿಯನ್ ಬ್ಯಾಂಕ್ ನೀಡುವ Ind Super 400 ದಿನಗಳವರೆಗೆ 7.25 ಪ್ರತಿಶತವನ್ನು ನೀಡುತ್ತದೆ. ಇದರಲ್ಲಿ ಹಿರಿಯರಿಗೆ ಶೇ.0.50 ಹೆಚ್ಚುವರಿ ಬಡ್ಡಿದರವಿದೆ. ಇದು ಜೂನ್ 30 ರವರೆಗೆ ಲಭ್ಯವಿರುತ್ತದೆ. ಬ್ಯಾಂಕ್ ಆಫ್ ಇಂಡಿಯಾ 'ಶುಭ್ ಆರಂಭ್ ಠೇವಣಿ' ಎಂಬ ವಿಶೇಷ ಯೋಜನೆಯಲ್ಲಿ 501 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ 7.80 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 7.65 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ.

ಓದಿ:ನೀವು 'ಆರೋಗ್ಯ ವಿಮೆ' ತೆಗೆದುಕೊಳ್ಳಲು ಬಯಸುವಿರಾ?: ಈ ಸಲಹೆಗಳನ್ನು ನೆನಪಿಡಿ

ABOUT THE AUTHOR

...view details