ನವದೆಹಲಿ:ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ಸೋಮವಾರ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮಧ್ಯಂತರ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 0.7 ರಷ್ಟು ಅಂದರೆ ಶೇಕಡಾ 6.2 ಕ್ಕೆ ಹೆಚ್ಚಿಸಿದೆ. ಹಾಗೆಯೇ 10 ಉದಯೋನ್ಮುಖ ಆರ್ಥಿಕತೆಗಳ ಬೆಳವಣಿಗೆ ಅಂದಾಜನ್ನು ಹಿಂದಿನ ಶೇಕಡಾ 4.3 ರಿಂದ ಶೇಕಡಾ 4 ಕ್ಕೆ ಇಳಿಸಿದೆ.
"ಚೀನಾದ ಪೂರೈಕೆ ವಲಯದ ಬೆಳವಣಿಗೆಯ ಸಾಮರ್ಥ್ಯದ ಅಂದಾಜಿನಲ್ಲಿ ಶೇಕಡಾ 0.7 ರಷ್ಟು ದೊಡ್ಡ ಕುಸಿತವು ಈ ಕಡಿತಕ್ಕೆ ಮುಖ್ಯ ಕಾರಣವಾಗಿದೆ" ಎಂದು ಫಿಚ್ ತನ್ನ ವರದಿಯಲ್ಲಿ ತಿಳಿಸಿದೆ. ಚೀನಾದ ಮಧ್ಯಂತರ ಬೆಳವಣಿಗೆ ಮುನ್ಸೂಚನೆಯನ್ನು ಹಿಂದಿನ ಶೇಕಡಾ 5.3 ರಿಂದ ಶೇಕಡಾ 4.6 ಕ್ಕೆ ಇಳಿಸಲಾಗಿದೆ.
"ಆದಾಗ್ಯೂ ನಾವು ಭಾರತ ಮತ್ತು ಮೆಕ್ಸಿಕೊ ವಿಷಯದಲ್ಲಿ ದೊಡ್ಡ ಬದಲಾವಣೆ ಮಾಡಿದ್ದೇವೆ, ಬಂಡವಾಳ-ಕಾರ್ಮಿಕ ಅನುಪಾತದ ಉತ್ತಮ ದೃಷ್ಟಿಕೋನದಿಂದ ಮೆಕ್ಸಿಕೊ ಪ್ರಯೋಜನ ಪಡೆಯುತ್ತಿದೆ. ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಶೇ 5.5ರಿಂದ ಶೇ 6.2ಕ್ಕೆ ಮತ್ತು ಮೆಕ್ಸಿಕೋದ ಜಿಡಿಪಿ ಬೆಳವಣಿಗೆ ಅಂದಾಜು ಶೇ 1.4ರಿಂದ ಶೇ 2ಕ್ಕೆ ಏರಿಕೆಯಾಗಿದೆ. ಹಾಗೆಯೇ ಜಿಡಿಪಿ ಬೆಳವಣಿಗೆ ಅಂದಾಜು ರಷ್ಯಾದಲ್ಲಿ ಶೇ 1.6ರಿಂದ ಶೇ 0.8ಕ್ಕೆ, ಕೊರಿಯಾದಲ್ಲಿ ಶೇ 2.3ರಿಂದ ಶೇ 2.1ಕ್ಕೆ, ದಕ್ಷಿಣ ಆಫ್ರಿಕಾದಲ್ಲಿ ಶೇ 1.2ರಿಂದ ಶೇ 1ಕ್ಕೆ ಇಳಿಕೆಯಾಗಿದೆ." ಎಂದು ಫಿಚ್ ತಿಳಿಸಿದೆ.