ನವದೆಹಲಿ:ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ದೇಶದ ಯುಪಿಐ ವಹಿವಾಟುಗಳು 10 ಬಿಲಿಯನ್ ದಾಟಿವೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಸಿಪಿಐ) ತಿಳಿಸಿದೆ. ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ 10 ಬಿಲಿಯನ್ ಅಂದರೆ 1 ಸಾವಿರ ಕೋಟಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಗಳು ನಡೆದಿವೆ. ಯುಪಿಐನಲ್ಲಿ ಮಾಸಿಕ ವಹಿವಾಟಿನ ಸಂಖ್ಯೆ 10.24 ಬಿಲಿಯನ್ ದಾಟಿದ್ದು, ನಿವ್ವಳ ವಹಿವಾಟು ಮೌಲ್ಯ 15.18 ಟ್ರಿಲಿಯನ್ ರೂ.ಗಳಾಗಿದೆ ಎಂದು ಎನ್ಪಿಸಿಐ ಗುರುವಾರ ತಡರಾತ್ರಿ ದೃಢಪಡಿಸಿದೆ.
ಯುಪಿಐ ಆಧರಿತ ವಹಿವಾಟುಗಳು ವರ್ಷದಿಂದ ವರ್ಷಕ್ಕೆ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ ಮತ್ತು ಆಗಸ್ಟ್ನಲ್ಲಿ 6.58 ಬಿಲಿಯನ್ ಮಾಸಿಕ ವಹಿವಾಟುಗಳನ್ನು ನಡೆದಿವೆ. ಜುಲೈನಲ್ಲಿ 9.96 ಬಿಲಿಯನ್ ಯುಪಿಐ ವಹಿವಾಟುಗಳು ನಡೆದಿದ್ದವು. ಅಕ್ಟೋಬರ್ 2019 ರಲ್ಲಿ ಮೊದಲ ಬಾರಿಗೆ ಯುಪಿಐ 1 ಬಿಲಿಯನ್ ಮಾಸಿಕ ವಹಿವಾಟುಗಳನ್ನು ದಾಟಿತ್ತು.
2018 ಮತ್ತು 2022 ರ ನಡುವೆ ಯುಪಿಐ ವಹಿವಾಟುಗಳು ಮೌಲ್ಯ ಮತ್ತು ಪರಿಮಾಣದ ದೃಷ್ಟಿಯಿಂದ ಕ್ರಮವಾಗಿ ಶೇಕಡಾ 1,320 ಮತ್ತು ಶೇಕಡಾ 1,876 ರಷ್ಟು ಹೆಚ್ಚಾಗಿವೆ. 2018 ರಲ್ಲಿ ಯುಪಿಐ ವಹಿವಾಟುಗಳು 374.63 ಕೋಟಿಯಷ್ಟಿದ್ದು, 2022 ರಲ್ಲಿ ಇದು ಶೇಕಡಾ 1,876 ರಷ್ಟು ಏರಿಕೆಯಾಗಿ 7,403.97 ಕೋಟಿಗೆ ತಲುಪಿದೆ. ಮೌಲ್ಯದ ದೃಷ್ಟಿಯಿಂದ, ಯುಪಿಐ ವಹಿವಾಟುಗಳು 2018 ರಲ್ಲಿ 5.86 ಲಕ್ಷ ಕೋಟಿ ರೂ.ಗಳಷ್ಟಿತ್ತು, ಇದು 2022 ರಲ್ಲಿ ಶೇಕಡಾ 1,320 ರಷ್ಟು ಏರಿಕೆಯಾಗಿ 83.2 ಲಕ್ಷ ಕೋಟಿ ರೂ.ಗೆ ತಲುಪಿದೆ.
ಈ ವರ್ಷದ ಫೆಬ್ರವರಿಯಲ್ಲಿ ಆರ್ಬಿಐ, ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಮತ್ತು ಎನ್ಆರ್ಐಗಳು ಭಾರತದಲ್ಲಿದ್ದಾಗ ಯುಪಿಐ ಬಳಸಿ ಪಾವತಿ ಮಾಡುವ ಅವಕಾಶ ನೀಡಿತ್ತು. ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಬೆಂಗಳೂರು, ಮುಂಬೈ ಮತ್ತು ನವದೆಹಲಿ) ಜಿ-20 ದೇಶಗಳ ಪ್ರಯಾಣಿಕರಿಗೆ ತಮ್ಮ ವ್ಯಾಪಾರಿ ಪಾವತಿಗಳಿಗಾಗಿ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.