ನವದೆಹಲಿ:ಅಮೆರಿಕದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ವ್ಯಾಪಿಸುತ್ತಿರುವ ನಡುವೆಯೇ ಇದಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರ ಬಂದಿದೆ. ಉತ್ತರ ಕೆರೊಲಿನಾ ಮೂಲದ ಫಸ್ಟ್ ಸಿಟಿಜನ್ಸ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪನಿಯು ತೊಂದರೆಗೊಳಗಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಖರೀದಿಸಿದೆ. ಅಮೆರಿಕದ ಅಧಿಕಾರಿಗಳು ಈ ಬ್ಯಾಂಕ್ ಅನ್ನು ವಶಪಡಿಸಿಕೊಂಡಿದ್ದರು. ಬಳಿಕ ಒಪ್ಪಂದದ ಮೂಲಕ ಫಸ್ಟ್ ಸಿಟಿಜನ್ಸ್ ಬ್ಯಾಂಕ್ SVB ಯ ಠೇವಣಿ, ಸಾಲ ಮತ್ತು ಶಾಖೆಗಳನ್ನು ಖರೀದಿಸಿದೆ. ಯುಎಸ್ ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್ಡಿಐಸಿ) ಈ ಮಾಹಿತಿ ನೀಡಿದೆ.
ಮಾರ್ಚ್ 10 ರ ಹೊತ್ತಿಗೆ SVB ಸುಮಾರು $167 ಶತಕೋಟಿಯ ಒಟ್ಟು ಆಸ್ತಿ ಮತ್ತು ಸರಿಸುಮಾರು $119 ಶತಕೋಟಿಯ ಒಟ್ಟು ಠೇವಣಿ ಹೊಂದಿದೆ ಎಂದು FDIC ಹೇಳಿದೆ. ಈ ವಹಿವಾಟಿನಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ $ 72 ಶತಕೋಟಿ ಆಸ್ತಿಯನ್ನು $ 16.5 ಶತಕೋಟಿ ರಿಯಾಯಿತಿಯಲ್ಲಿ ಖರೀದಿಸಲಾಗಿದೆ. ಸುಮಾರು $90 ಬಿಲಿಯನ್ ಸೆಕ್ಯೂರಿಟಿಗಳು ಮತ್ತು ಇತರ ಸ್ವತ್ತುಗಳು FDIC ನೊಂದಿಗೆ ರಿಸೀವರ್‌ಶಿಪ್‌ನಲ್ಲಿ ಉಳಿದಿವೆ.
ಇಂದಿನಿಂದ 17 ಶಾಖೆಗಳು ಆರಂಭ: ಠೇವಣಿದಾರರನ್ನು ರಕ್ಷಿಸಲು FDIC ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲಾ ಠೇವಣಿಗಳನ್ನು ಮತ್ತು ಎಲ್ಲಾ ಸ್ವತ್ತುಗಳನ್ನು ಬ್ರಿಡ್ಜ್ ಬ್ಯಾಂಕ್ ಆಫ್ ಸಿಲಿಕಾನ್ ವ್ಯಾಲಿ (ನ್ಯಾಷನಲ್ ಅಸೋಸಿಯೇಷನ್ - ಪೂರ್ಣ ಸೇವಾ ಬ್ಯಾಂಕ್) ಗೆ ವರ್ಗಾಯಿಸಿತ್ತು. ಇದನ್ನು FDIC ನಿರ್ವಹಿಸುತ್ತದೆ. ಬ್ರಿಡ್ಜ್ ಬ್ಯಾಂಕ್‌ನ 17 ಶಾಖೆಗಳು ಸೋಮವಾರದಂದು ಫಸ್ಟ್-ಸಿಟಿಜನ್ಸ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪನಿಯಾಗಿ ತೆರೆಯಲ್ಪಟ್ಟಿವೆ. ಈ ಮೂಲಕ SVB ಠೇವಣಿದಾರರು ಸ್ವಯಂಚಾಲಿತವಾಗಿ ಫಸ್ಟ್-ಸಿಟಿಜನ್ಸ್ ಬ್ಯಾಂಕ್‌ನ ಠೇವಣಿದಾರರಾಗುತ್ತಾರೆ.
ಫಸ್ಟ್ ಸಿಟಿಜನ್ 30ನೇ ಅತಿದೊಡ್ಡ US ಬ್ಯಾಂಕ್:ಫೆಡರಲ್ ರಿಸರ್ವ್ ಪ್ರಕಾರ, 2022 ರ ಡಿಸೆಂಬರ್ 31 ರ ಹೊತ್ತಿಗೆ $109 ಶತಕೋಟಿ ಆಸ್ತಿಯೊಂದಿಗೆ Raleigh, NC ಮೂಲದ ಫಸ್ಟ್ ಸಿಟಿಜನ್ಸ್ 30 ನೇ ಅತಿದೊಡ್ಡ US ಬ್ಯಾಂಕ್ ಆಗಿ ಹೊರಹೊಮ್ಮಿದೆ.