ಕರ್ನಾಟಕ

karnataka

ETV Bharat / business

ಆರ್‌ಬಿಐ ಡಿಜಿಟಲ್​ ಸಾಲ ನೀತಿ.. ಕಾರ್ಡ್ ಸೇವೆ ನಿಲ್ಲಿಸಿದ ಫಿನ್‌ಟೆಕ್ ಯುನಿ - Fintech Uni suspends card services

ಆರ್​​ಬಿಐ ಡಿಜಿಟಲ್​ ಸಾಲ ನೀತಿ ಪರಿಷ್ಕರಿಸಿದ ಬಳಿಕ ಆನ್​ಲೈನ್​ ಪಾವತಿ ಸಂಸ್ಥೆಯಾದ ಫಿನ್​ಟೆಕ್​ ಯುನಿ ತನ್ನ ಕಾರ್ಡ್​ಗಳ ಬಳಕೆಗೆ ಇತಿಶ್ರೀ ಹಾಡಿದೆ.

digital-lending-norms
ಕಾರ್ಡ್ ಸೇವೆ ನಿಲ್ಲಿಸಿದ ಫಿನ್‌ಟೆಕ್ ಯುನಿ

By

Published : Aug 20, 2022, 9:41 AM IST

ನವದೆಹಲಿ:ಡಿಜಿಟಲ್ ಸಾಲ ನೀಡುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಬಳಿಕ ಫಿನ್​ಟೆಕ್​ ಸ್ಟಾರ್ಟ್​ಅಪ್​ ಯುನಿ ಕಾರ್ಡ್​ ಸೇವೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಯುನಿ ಪೇ 1/3 ಕಾರ್ಡ್ ಮತ್ತು ಯುನಿ ಪೇ 1/2 ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಸ್ಟಾರ್ಟ್​ಅಪ್​ ಹೇಳಿದೆ. ಇದು ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರ್​ಬಿಐ ಡಿಜಿಟಲ್​ ಸಾಲ ನೀತಿಯನ್ನು ಪರಿಷ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಫಿನೆಟೆಕ್​ ಯುನಿ ತನ್ನ ಕಾರ್ಡ್​ ಸೇವೆಯನ್ನು ನಿಲ್ಲಿಸಲಿದೆ. ಈ ಪ್ರಕ್ರಿಯೆಯು ನಮ್ಮ ಗ್ರಾಹಕರಿಗೆ ಹಂತ ಹಂತವಾಗಿ ವರ್ಗವಾಗಲಿದೆ. ಆಗಸ್ಟ್ 22ರ ಸೋಮವಾರದೊಳಗೆ ಇದು ಪೂರ್ಣಗೊಳ್ಳಲಿದೆ. ಈ ನಿರ್ಧಾರ ಕಠಿಣವಾದರೂ ಆರ್​ಬಿಐ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಕಂಪನಿ ಹೇಳಿದೆ.

ಶುಲ್ಕ ಪಾವತಿಗಳು, ವೈದ್ಯಕೀಯ ಬಿಲ್‌ಗಳು ಮತ್ತು ತುರ್ತು ಪರಿಸ್ಥಿತಿಗಳಂತಹ ತುರ್ತು ಅಗತ್ಯಗಳಿಗಾಗಿ ಯುನಿ ಕಾರ್ಡ್ ಅನ್ನು ಬಳಸಲಾಗುತ್ತಿತ್ತು. ಈಗ ಕಾರ್ಡ್​ಗಳ ಬಳಕೆ ನಿರ್ಬಂಧಿಸಿದ ಬಳಿಕ ಗ್ರಾಹಕರು ಯುನಿ ಕ್ಯಾಶ್ ಅನ್ನು ಹೊಂದಿ ಕ್ರೆಡಿಟ್​ ಲೈನ್​ಗೆ ವಾಪಸ್​ ಆಗಲಿದ್ದಾರೆ ಎಂದು ಫಿನ್​ಟೆಕ್​ ಯುನಿ ಸಂಸ್ಥಾಪಕ ನಿತಿನ್ ಗುಪ್ತಾ ಹೇಳಿದರು.

ಜನರಲ್ ಕ್ಯಾಟಲಿಸ್ಟ್, ಎಲಿವೇಶನ್ ಕ್ಯಾಪಿಟಲ್ ಮತ್ತು ಲೈಟ್‌ಸ್ಪೀಡ್ ವೆಂಚರ್ ಪಾಲುದಾರರಂತಹ ಹೂಡಿಕೆದಾರರು ಯುನಿ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಸಾಲದ ಇತ್ತೀಚಿನ ಮಾರ್ಗಸೂಚಿಗಳು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ದೃಢವಾದ ಚೌಕಟ್ಟನ್ನು ರಚಿಸುವ ಗುರಿ ಹೊಂದಿವೆ.

ಡಿಜಿಟಲ್​ ಸಾಲದ ಆರ್​ಬಿಐ ಮಾರ್ಗಸೂಚಿಗಳು ಹೀಗಿವೆ

  • ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸುವ ಮುನ್ನ ಸಾಲಗಾರನಿಗೆ ಪ್ರಮಾಣೀಕರಿಸಿದ ಕೀ ಫ್ಯಾಕ್ಟ್ ಸ್ಟೇಟ್​ಮೆಂಟ್​ (KFS) ಒದಗಿಸಬೇಕು. ಡಿಜಿಟಲ್ ಸಾಲದ ಸಂಪೂರ್ಣ ವೆಚ್ಚಗಳ ಮಾಹಿತಿಯನ್ನು ವಾರ್ಷಿಕ ಶೇಕಡವಾರು ದರ (APR) ರೂಪದಲ್ಲಿ ಕೆಎಫ್​ಎಸ್​ ಭಾಗವಾಗಿ ಸಾಲದಾತ ಸಂಸ್ಥೆಗಳು ಸಾಲಗಾರನಿಗೆ ನೀಡಬೇಕು.
  • ಸಾಲಗಾರರ ಅನುಮತಿಯಿಲ್ಲದೇ ಕ್ರೆಡಿಟ್ ಮಿತಿಯಲ್ಲಿ ಯಾವುದೇ ಸ್ವಯಂಚಾಲಿತ ಹೆಚ್ಚಳವನ್ನು ಮಾಡುವಂತಿಲ್ಲ. ಕೂಲಿಂಗ್ ಆಫ್ ಅಥವಾ ಲುಕ್ ಆಫ್ ಅವಧಿಯಲ್ಲಿ ಸಾಲಗಾರರು ಅಸಲನ್ನು ಪಾವತಿಸುವ ಮೂಲಕ ಡಿಜಿಟಲ್ ಸಾಲಗಳನ್ನು ಚುಕ್ತಾ ಮಾಡಬಹುದು. ಇಂತಹ ಸಂದರ್ಭದಲ್ಲಿ ಸಾಲದ ಒಪ್ಪಂದದ ಭಾಗವಾಗಿ ಅನುಪಾತದ ಎಪಿಆರ್ ಅನ್ನು ಯಾವುದೇ ದಂಡವಿಲ್ಲದೇ ನೀಡಲಾಗುತ್ತದೆ.
  • ಫಿನ್ ಟೆಕ್ ಅಥವಾ ಡಿಜಿಟಲ್ ಸಾಲಕ್ಕೆ ಸಂಬಂಧಿಸಿದ ಗ್ರಾಹಕರ ದೂರುಗಳ ನಿರ್ವಹಣೆಗೆ ನಿಯಂತ್ರಿತ ಸಂಸ್ಥೆಗಳು ಹಾಗೂ ಎಲ್​ಎಸ್​ಪಿಗಳು ಕುಂದುಕೊರತೆ ವಿಚಾರಣೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಈ ಅಧಿಕಾರಿಯು ಡಿಜಿಟಲ್ ಸಾಲ ಒದಗಿಸುವ ಮೊಬೈಲ್ ಅಪ್ಲಿಕೇಷನ್​ಗಳ ವಿರುದ್ಧದ ದೂರುಗಳನ್ನು ನಿರ್ವಹಿಸಬೇಕು. ಈ ಅಧಿಕಾರಿಯ ಸಂಪರ್ಕ ಮಾಹಿತಿಯನ್ನು ಡಿಜಿಟಲ್ ಸಾಲದ ಅಪ್ಲಿಕೇಷನ್​ಗಳಲ್ಲಿ ಹಾಗೂ ನಿಯಂತ್ರಿತ ಸಂಸ್ಥೆ ವೆಬ್​ಸೈಟ್​ಗಳಲ್ಲಿ ಪ್ರಕಟಿಸಬೇಕು.
  • ಸಾಲಗಾರ ನೀಡಿದ ಯಾವುದೇ ದೂರನ್ನು ನಿಗದಿತ 30 ದಿನಗಳೊಳಗೆ ಸಂಬಂಧಿತ ಸಂಸ್ಥೆ ಪರಿಹರಿಸದಿದ್ದರೆ ಆತ ಅಥವಾ ಆಕೆ ರಿಸರ್ವ್ ಬ್ಯಾಂಕ್ ಇಂಟಿಗ್ರೇಟೆಡ್ ಒಂಬುಡ್ಸ್​ಮನ್ ಯೋಜನೆಯಡಿ ದೂರು ದಾಖಲಿಸಬಹುದು.
  • ಡಿಎಲ್​ಎಗಳು ಸಂಗ್ರಹಿಸಿದ ದತ್ತಾಂಶಗಳು ಅಗತ್ಯ ಆಧಾರಿತವಾಗಿದ್ದು, ಸ್ಪಷ್ಟ ಆಡಿಟ್ ಟ್ರಯಲ್​ಗಳನ್ನು ಹೊಂದಿರುವ ಜೊತೆಗೆ ಸಾಲಗಾರನ ಪೂರ್ವಾನುಮತಿ ಪಡೆದಿರಬೇಕು.
  • ನಿರ್ದಿಷ್ಟ ದತ್ತಾಂಶದ ಬಳಕೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಆಯ್ಕೆಯನ್ನು ಸಾಲಗಾರರಿಗೆ ನೀಡಬೇಕು.

ಓದಿ:ಸಚಿವರು, ಸಂಸದರ ಹೊಸ ವಾಹನ ಖರೀದಿ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ

ABOUT THE AUTHOR

...view details