ನವದೆಹಲಿ: ಇಂದಿನಿಂದ ಅನೇಕ ಆರ್ಥಿಕ ಯೋಜನೆಗಳಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿವೆ. ಸಣ್ಣ ಮೊತ್ತದ ಉಳಿತಾಯ ಯೋಜನೆಗಳಿಂದ ಹಿಡಿದು ಸಿಮ್ ಕಾರ್ಡ್ ವಿತರಣೆವರೆಗೂ ನಿಮಗೆ ಗೊತ್ತಿರಬೇಕಾದ ವಿಚಾರಗಳು ಇವು.
ಬಡ್ಡಿದರ ಹೆಚ್ಚಳ:ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಹೆಚ್ಚಿಸಲಾಗಿದೆ. ಪ್ರಸ್ತುತ, ಈ ಯೋಜನೆಯ ಬಡ್ಡಿ ಶೇಕಡಾ 8ರಷ್ಟಿದೆ. ಆದರೆ ಇದನ್ನು ಶೇ.8.2ಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.7ರಿಂದ ಶೇ.7.1ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪರಿಷ್ಕರಿಸುತ್ತದೆ. ಹೊಸ ದರಗಳು ಜನವರಿ 1ರಿಂದ ಮಾರ್ಚ್ 31ರವರೆಗೆ ಅನ್ವಯಿಸುತ್ತವೆ.
ಕಾರುಗಳ ಏರಿಕೆ: ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಟಾಟಾ ಮೋಟಾರ್ಸ್, ಔಡಿ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್ ಜನವರಿಯಿಂದ ತಮ್ಮ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ವಾಹನಗಳ ಬೆಲೆ ಶೇ.2ರಿಂದ 3ರಷ್ಟು ಏರಿಕೆಯಾಗಲಿದೆ.
UPI ಖಾತೆಗಳು ಬಂದ್:ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ GooglePay, PhonePay, Paytm ನಂತಹ UPI ಅಪ್ಲಿಕೇಶನ್‌ಗಳಲ್ಲಿನ UPI ಐಡಿಗಳು ಮತ್ತು UPI ಸಂಖ್ಯೆಗಳು ಇಂದಿನಿಂದ ನಿಷ್ಕ್ರಿಯಗೊಳ್ಳುತ್ತವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನವೆಂಬರ್ 7, 2023 ರಂದು ಆದೇಶ ಹೊರಡಿಸಿತ್ತು.
ವಿಮಾ ನಿಯಮಗಳು:ಆರೋಗ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದ ಮೂಲಭೂತ ಮಾಹಿತಿ ಪಾಲಿಸಿದಾರರಿಗೆ ಸುಲಭವಾಗಿ ಅರ್ಥವಾಗುವಂತೆ 'ಗ್ರಾಹಕ ಮಾಹಿತಿ ಹಾಳೆಗಳನ್ನು' ನೀಡುವಂತೆ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (IRDAI) ವಿಮಾದಾರರಿಗೆ ನಿರ್ದೇಶನ ನೀಡಿದೆ. ಈ ನಿಯಮಗಳು ಇಂದಿನಿಂದ (ಜನವರಿ 1, 2024) ಜಾರಿಗೆ ಬಂದಿವೆ.
ಸಿಮ್ ಕಾರ್ಡ್‌ಗೆ ಹೊಸ ನಿಯಮ: ಸಿಮ್ ಕಾರ್ಡ್ ವಿತರಣೆಗೆ ಸಂಬಂಧಿಸಿದ ಹೊಸ ನಿಯಮಗಳೂ ಇಂದಿನಿಂದ ಜಾರಿಗೆ ಬಂದಿವೆ. ಟೆಲಿಕಾಂ ಇಲಾಖೆ ಇದುವರೆಗೆ ಅನುಸರಿಸುತ್ತಿದ್ದ ಪೇಪರ್ ಆಧಾರಿತ ಕೆವೈಸಿ ಪರಿಶೀಲನೆ ಪ್ರಕ್ರಿಯೆ ನಿಲ್ಲಿಸಿದೆ. ಇದಕ್ಕೆ ಬದಲಾಗಿ ಡಿಜಿಟಲ್ ಪರಿಶೀಲನೆಯನ್ನು ತರಲಾಗಿದೆ. ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಸಂಪೂರ್ಣವಾಗಿ ಮೊಬೈಲ್ ಮೂಲಕವೇ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಸಿಮ್ ಕಾರ್ಡ್ ಮೂಲಕ ವಂಚನೆ ತಡೆಗಟ್ಟಲು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕೆಲವು ಕ್ರಮಗಳ ಭಾಗವಾಗಿ ಈ ಹೊಸ ಡಿಜಿಟಲ್ ನೀತಿಯನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ:ಸರ್ಕಾರ ಉದ್ಯಮಸ್ನೇಹಿ ವಾತಾವರಣ ಉತ್ತೇಜಿಸುವ ಗುರಿ ಹೊಂದಿದೆ: ಟೆಕ್ ಸಮ್ಮಿಟ್‌ನಲ್ಲಿ ಸಿಎಂ ಸಿದ್ದರಾಮಯ್ಯ