ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಬುಧವಾರ 2023-24ರ 5 ನೇ ಇ-ಹರಾಜಿನಲ್ಲಿ 1.06 ಲಕ್ಷ ಟನ್ ಗೋಧಿ ಮತ್ತು 100 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ. ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಎಫ್‌ಸಿಐ ವಾರಕ್ಕೊಮ್ಮೆ ಇ-ಹರಾಜುಗಳನ್ನು ಆಯೋಜಿಸುತ್ತದೆ. ಸರ್ಕಾರವು ಬೆಲೆಗಳನ್ನು ಸ್ಥಿರವಾಗಿರಿಸಲು ಬದ್ಧವಾಗಿದೆ ಮತ್ತು ಗ್ರಾಹಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾನು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಆಹಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
361 ಡಿಪೋಗಳಿಂದ 1.16 ಲಕ್ಷ ಟನ್ ಗೋಧಿ ಮತ್ತು 178 ಡಿಪೋಗಳಿಂದ 1.46 ಲಕ್ಷ ಟನ್ ಅಕ್ಕಿಯನ್ನು ದೇಶಾದ್ಯಂತ ಹರಾಜು ಮಾಡಲಾಗಿದೆ ಎಂದು ಅದು ಹೇಳಿದೆ. ಪ್ರಸ್ತುತ ಇ-ಹರಾಜಿನಲ್ಲಿ ಪ್ರತಿಯೊಬ್ಬ ಖರೀದಿದಾರ ಗರಿಷ್ಠ 100 ಟನ್ ಗೋಧಿ ಮತ್ತು 1000 ಟನ್ ಅಕ್ಕಿ ಖರೀದಿಸುವ ಮಿತಿ ವಿಧಿಸಲಾಗಿತ್ತು. ಸಣ್ಣ ಮತ್ತು ಕೊನೆ ಹಂತದ ಮಾರಾಟಗಾರರನ್ನು ಪ್ರೋತ್ಸಾಹಿಸಲು ಮತ್ತು ಹೆಚ್ಚು ಸಂಖ್ಯೆಯ ಖರೀದಿದಾರರು ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಈ ಮಿತಿಯನ್ನು ವಿಧಿಸಲಾಗಿತ್ತು ಎಂದು ಸರ್ಕಾರ ಹೇಳಿದೆ.
ಖಾದ್ಯ ತೈಲ ಬೆಲೆಗಳು ಶೇಕಡಾ 29 ರಷ್ಟು ಇಳಿಕೆ: ಕೇಂದ್ರ ಸರ್ಕಾರದ ಕ್ರಮಗಳು ಮತ್ತು ಜಾಗತಿಕವಾಗಿ ಬೆಲೆಗಳ ಇಳಿಕೆಯಿಂದಾಗಿ ಕಳೆದ ಒಂದು ವರ್ಷದಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಪಾಮೊಲಿಯನ್ ಚಿಲ್ಲರೆ ಬೆಲೆಗಳು ಕ್ರಮವಾಗಿ ಶೇ 29, 19 ಮತ್ತು 25 ರಷ್ಟು ಕುಸಿದಿವೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.