ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಜೂನ್ 30 ರಂದು ಕೊನೆಗೊಂಡ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೆಟಾ ತನ್ನ ಹಣಕಾಸು ಫಲಿತಾಂಶಗಳ ವರದಿಯನ್ನು ಬಿಡುಗಡೆ ಮಾಡಿದ್ದು, $ 32 ಬಿಲಿಯನ್ ಆದಾಯ ಗಳಿಸಿರುವುದಾಗಿ ಹೇಳಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 11ರಷ್ಟು ಹೆಚ್ಚಳವಾಗಿದೆ. ಫೇಸ್‌ಬುಕ್‌ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 3.03 ಶತಕೋಟಿ ಆಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 3 ರಷ್ಟು ಏರಿಕೆಯಾಗಿದೆ.
"ನಮ್ಮ ತ್ರೈಮಾಸಿಕ ಅವಧಿ ಚೆನ್ನಾಗಿತ್ತು. ನಮ್ಮ ಎಲ್ಲ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಲಾಮಾ 2, ಥ್ರೆಡ್ಸ್, ರೀಲ್ಸ್, ಮುಂಬರಲಿರುವ ಹೊಸ AI ಉತ್ಪನ್ನಗಳು ಮತ್ತು ಕ್ವೆಸ್ಟ್ 3 ಬಿಡುಗಡೆಯೊಂದಿಗೆ ನಾನು ಆಶಾದಾಯಕವಾದ ಭವಿಷ್ಯವನ್ನು ಕಾಣುತ್ತಿದ್ದೇನೆ” ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಬುಧವಾರ ವರದಿಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಜೂನ್‌ನಲ್ಲಿ ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರು ಸರಾಸರಿ 2.06 ಶತಕೋಟಿಯಾಗಿದೆ ಎಂದು ಕಂಪನಿ ವರದಿ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ 5 ಶೇಕಡಾ ಹೆಚ್ಚಳವಾಗಿದೆ. "ಜೂನ್ 30, 2023 ರಂತೆ ಕಂಪನಿಯ ದೀರ್ಘಾವಧಿ ಸಾಲ $ 18.38 ಬಿಲಿಯನ್ ಆಗಿತ್ತು" ಎಂದು ಅದು ತಿಳಿಸಿದೆ.
ಜೂನ್ 30 ರ ಹೊತ್ತಿಗೆ ಕಂಪನಿಯಲ್ಲಿ 71,469 ಉದ್ಯೋಗಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ನೋಡಿದರೆ ಇದು ಶೇಕಡಾ 14 ರಷ್ಟು ಕಡಿಮೆಯಾಗಿದೆ. 2023 ರಲ್ಲಿ ನಡೆದ ಉದ್ಯೋಗ ಕಡಿತಗಳಲ್ಲಿ ಕೆಲಸ ಕಳೆದುಕೊಂಡ ಒಟ್ಟು ಉದ್ಯೋಗಿಗಳ ಪೈಕಿ ಅರ್ಧದಷ್ಟು ಸಂಖ್ಯೆಯನ್ನು ಈ ವರದಿಯಲ್ಲಿ ಸೇರಿಸಲಾಗಿದೆ.