ನವದೆಹಲಿ:ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾರತವು ಡಿಜಿಟಲ್ ಆರ್ಥಿಕತೆಯಲ್ಲಿನ ತನ್ನ ಸಾಧನೆಗಳು ಹಾಗೂ ವಿಶೇಷವಾಗಿ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ವಿಶ್ವದ ಇತರ ರಾಷ್ಟ್ರಗಳಿಗೆ ಪ್ರದರ್ಶಿಸಲು ಮತ್ತು ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನೆರವಾಗಲು ಸಿದ್ಧವಾಗಿದೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (India's digital public infrastructure) ಜಾಗತಿಕ ಸವಾಲುಗಳಿಗೆ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ನೀಡುತ್ತದೆ ಎಂದು ಹೇಳಿದ್ದರು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರವು ಅಭೂತಪೂರ್ವವಾಗಿದೆ. ಇದು 2015ರಲ್ಲಿ ನಮ್ಮ ಡಿಜಿಟಲ್ ಇಂಡಿಯಾ ಉಪಕ್ರಮದೊಂದಿಗೆ ಪ್ರಾರಂಭವಾಯಿತು. ನಾವೀನ್ಯತೆಯ ಬಗ್ಗೆ ನಮ್ಮ ಅಚಲ ನಂಬಿಕೆಯಿಂದ ನಡೆಸಲ್ಪಟ್ಟಿದೆ. ಭಾರತವು 850 ಮಿಲಿಯನ್ (85 ಕೋಟಿ)ಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು, ವಿಶ್ವದ ಕೆಲವು ಅಗ್ಗದ ಡೇಟಾ ವೆಚ್ಚಗಳನ್ನು ಆನಂದಿಸುತ್ತಿದೆ ಎಂದಿದ್ದರು.
ಡಿಜಿಟಲೀಕರಣಕ್ಕೆ ತ್ರಿಶಕ್ತಿ ಬಳಕೆ:ಆಡಳಿತದಲ್ಲಿ ಬದಲಾವಣೆ ತರಲು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಒಳಗೊಳ್ಳುವಿಕೆ, ವೇಗವಾಗಿ ಮತ್ತು ಪಾರದರ್ಶಕವಾಗಿಸಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ನಮ್ಮ ಅನನ್ಯ ಡಿಜಿಟಲ್ ಗುರುತಿನ ವೇದಿಕೆಯಾದ ಆಧಾರ್, 1.3 ಬಿಲಿಯನ್ (130 ಕೋಟಿ)ಗಿಂತಲೂ ಹೆಚ್ಚು ಜನರನ್ನು ಒಳಗೊಂಡಿದೆ. ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ತ್ವರಿತಗೊಳಿಸಲು ನಾವು JAM (ಜಾಮ್) ಎಂದರೆ ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ (Jan Dhan bank accounts, Aadhaar, and Mobile) ತ್ರಿಶಕ್ತಿಯನ್ನು ಬಳಸಿಸಿಕೊಂಡಿದ್ದೇವೆ. ಪ್ರತಿ ತಿಂಗಳು ನಮ್ಮ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐ (Unified Payment Interface)ನಲ್ಲಿ ಸುಮಾರು 10 ಬಿಲಿಯನ್ (1000 ಕೋಟಿ) ವಹಿವಾಟುಗಳು ನಡೆಯುತ್ತವೆ ಎಂದು ಪ್ರಧಾನಿ ತಿಳಿಸಿದ್ದರು.
ಜಿ20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯ ನಂತರ ಬಿಡುಗಡೆಯಾದ ದಾಖಲೆಯು ಡಿಜಿಟಲ್ ಕ್ಷೇತ್ರ ಎಲ್ಲ ದೇಶಗಳಿಗೆ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಗಣನೀಯ ಸವಾಲಾಗಿದೆ ಎಂದು ತಿಳಿಸಿದೆ. ಹಿಂದಿನ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಂಡ ಡಿಜಿಟಲ್ ಅಂತರಗಳನ್ನು ಕಡಿಮೆ ಮಾಡಲು ಎಲ್ಲರಿಗೆ ಅಂತರ್ಗತ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ತುರ್ತು ಕ್ರಮದ ಬಗ್ಗೆ ಉಲ್ಲೇಖಿಸಲಾಗಿದೆ.
ಸಿಯುಟಿಎಸ್ (CUTS) ಸಂಶೋಧನಾ ನಿರ್ದೇಶಕ ಅಮೋಲ್ ಕುಲಕರ್ಣಿ, ಕಳೆದ ಐದು ವರ್ಷಗಳಲ್ಲಿ ಭಾರತವು ಮೊಬೈಲ್ ಫೋನ್‌ಗಳನ್ನು ಬಳಸುವುದರಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಯುಐಡಿಎಐ ಮತ್ತು ಜನಧನ್ ಖಾತೆಗಳು ಬ್ಯಾಂಕಿಂಗ್‌ನಂತಹ ಸರ್ಕಾರಿ ಹಣಕಾಸು ಸೇವೆಗಳಿಗೆ ಪ್ರವೇಶ ಪಡೆಯಲು ಜನರಿಗೆ ಸಹಾಯ ಮಾಡಿದವು. ಇದು ಭಾರತದ ಒಂದು ಸ್ಪಷ್ಟವಾದ ಯಶಸ್ಸು ಎಂದು ಈಟಿವಿ ಭಾರತ್ಗೆ ತಿಳಿಸಿದರು.