ನವದೆಹಲಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಆಧಾರಿತ ಉತ್ಪನ್ನಗಳ ಬೆಲೆ ಸುಮಾರು ಒಂದೂವರೆ ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ ಮತ್ತು ಫೆಬ್ರವರಿ ತಿಂಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ತಾಪಮಾನ ಹೆಚ್ಚಾದ ಕಾರಣ ಬೆಲೆಗಳು ಹೆಚ್ಚಳ ಮಟ್ಟದಲ್ಲೇ ಉಳಿಯುವ ನಿರೀಕ್ಷೆಯಿದೆ.
ಹಣದುಬ್ಬರ vs ಬಡ್ಡಿ ದರ : ಕಳೆದ ವರ್ಷ ಜುಲೈನಿಂದ ಎರಡಂಕಿಯಲ್ಲಿರುವ ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಬೆಲೆಗಳು ಏರಿಕೆ ಮಟ್ಟದಲ್ಲಿರುವುದು ಬಡ್ಡಿ ದರಗಳು, ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ನಿಂದ ಸಾಲ ಪಡೆಯುವ ಮತ್ತು ಪಾವತಿಸುವ ರೆಪೋ ಮತ್ತು ರಿವರ್ಸ್ ರೆಪೋ ದರಗಳ ಮೇಲೆ ನೇರವಾದ ಸಂಬಂಧ ಹೊಂದಿದೆ. ಇದು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಇತರ ಸಾಲಗಳ ಬಡ್ಡಿ ದರಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಗೋಧಿ ಬೆಲೆ : ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆಗಳು ಅಕ್ಟೋಬರ್ 2021 ರಿಂದ ಹೆಚ್ಚಾಗಲು ಆರಂಭಿಸಿದವು. ಅಕ್ಟೋಬರ್ 2020 ಕ್ಕೆ ಹೋಲಿಸಿದರೆ ಇವುಗಳ ಬೆಲೆಗಳು ಶೇ 1 ರಷ್ಟು ದುಬಾರಿಯಾದವು. ಆದರೆ ಅದರ ನಂತರ ಗೋದಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಮುಂದಿನ 14 ತಿಂಗಳುಗಳ ಕಾಲ ಸತತವಾಗಿ ಏರಲಿವೆ ಎಂದು ಊಹಿಸುವುದು ಸಾಧ್ಯವಿರಲಿಲ್ಲ. ಆಹಾರ ಭದ್ರತೆ ಕಾಪಾಡಿಕೊಳ್ಳುವುದಕ್ಕಾಗಿ ಭಾರತವು ಸಾಕಷ್ಟು ಗೋದಿ ದಾಸ್ತಾನು ಕಾಯ್ದಿಟ್ಟುಕೊಂಡಿರುವುದು ಗಮನಾರ್ಹ.
ಅಂಕಿ ಅಂಶಗಳ ಪ್ರಕಾರ ಮೇ 2022ರ ತಿಂಗಳಲ್ಲಿ 10 ಬೇಸಿಸ್ ಪಾಯಿಂಟ್ನಷ್ಟು ಅಂದರೆ ಶೇ 8.6 ರಿಂದ 8.5 ಕ್ಕೆ ಕುಸಿದಿದ್ದು (ಶೇಕಡಾ 1ರ ಹತ್ತನೇ ಒಂದು ಭಾಗ) ಹೊರತುಪಡಿಸಿ, ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆಗಳು ಸತತವಾಗಿ ಏರಿಕೆಯಾಗಿವೆ. ಕಳೆದ ವರ್ಷ ಜುಲೈನಲ್ಲಿ ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಹಣದುಬ್ಬರವು ಶೇ 10.7 ರ ಎರಡಂಕಿಯ ಮಾರ್ಕ್ ಅನ್ನು ಮುಟ್ಟಿದಾಗ ಪರಿಸ್ಥಿತಿ ಇನ್ನಷ್ಟು ಜಟಿಲವಾಯಿತು. ಅಂದಿನಿಂದ ಗೋಧಿ ಬೆಲೆಗಳು ಮೇಲ್ಮಟ್ಟದಲ್ಲೇ ಉಳಿದಿವೆ.
ಇದಲ್ಲದೆ, ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷದ ಜನವರಿಯಲ್ಲಿ, ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಹಣದುಬ್ಬರವು ಶೇ 20 ರ ಗಡಿಯನ್ನು ದಾಟಿದೆ. ಇತ್ತೀಚಿನ ಅವಧಿಯಲ್ಲಿ ಗೋಧಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆ ಇತ್ತಾದರೂ, ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಆಹಾರದ ಕಣಜ ಎಂದು ಕರೆಯಲ್ಪಡುವ ಪಂಜಾಬ್ ರಾಜ್ಯದಲ್ಲಿ ಫೆಬ್ರವರಿ ತಿಂಗಳಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನದಿಂದಾಗಿ ಅದು ಸಾಧ್ಯವಾಗಲಿಲ್ಲ.
CPI ನಲ್ಲಿ ಗೋಧಿ ಉತ್ಪನ್ನಗಳು : ಗೋಧಿ ಮತ್ತು ಗೋಧಿ ಸಂಬಂಧಿತ ಉತ್ಪನ್ನಗಳು ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (CPI) ಶೇ 3.89 ರಷ್ಟು ಸಂಯೋಜಿತ ತೂಕವನ್ನು ಹೊಂದಿವೆ. ಆದಾಗ್ಯೂ, ಚಿಲ್ಲರೆ ಹಣದುಬ್ಬರಕ್ಕೆ ಅವುಗಳ ಕೊಡುಗೆ ಕ್ರಮವಾಗಿ ಡಿಸೆಂಬರ್ 2022 ಮತ್ತು ಜನವರಿ 2023 ರಲ್ಲಿ ಕ್ರಮವಾಗಿ ಶೇ 11.4 ಮತ್ತು 11.0 ಆಗಿತ್ತು. ಚಿಲ್ಲರೆ ಹಣದುಬ್ಬರ ಸೂಚ್ಯಂಕದಲ್ಲಿ ಅವುಗಳ ತೂಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿರುವ ಇತರ ಆಹಾರ ಪದಾರ್ಥಗಳೆಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಸಾಲೆಗಳು ಮತ್ತು ಸಿದ್ಧಪಡಿಸಿದ ಊಟ, ತಿಂಡಿಗಳು, ಸಿಹಿತಿಂಡಿಗಳು ಇತ್ಯಾದಿ. ತರಕಾರಿಗಳು CPI ನಲ್ಲಿ ಶೇ 6.04 ತೂಕವನ್ನು ಹೊಂದಿವೆ ಮತ್ತು ಡಿಸೆಂಬರ್ 2022 ರಲ್ಲಿ ಮತ್ತು ಜನವರಿ 2023 ರಲ್ಲಿ ಕ್ರಮವಾಗಿ ಚಿಲ್ಲರೆ ಹಣದುಬ್ಬರಕ್ಕೆ ಅವುಗಳ ಕೊಡುಗೆ ಋಣಾತ್ಮಕ ಶೇ 18.0 ಮತ್ತು ಋಣಾತ್ಮಕ ಶೇ 11.5 ಆಗಿದೆ.