ಕರ್ನಾಟಕ

karnataka

ETV Bharat / business

ದುಬಾರಿ ಕಾರು ತಯಾರಕ ಕಂಪನಿ ಲಂಬೋರ್ಗಿನಿ ಚಿತ್ತ ಸಣ್ಣ ನಗರಗಳತ್ತ - ದುಬಾರಿ ಕಾರು ತಯಾರಕ ಲಂಬೋರ್ಗಿನಿ

ದೇಶದ ಮಹಾನಗರಗಳಲ್ಲಿ ಈಗಾಗಲೇ ಉತ್ತಮವಾಗಿ ಕಾರು ಮಾರಾಟ ಮಾಡುತ್ತಿರುವ ಲಂಬೋರ್ಗಿನಿ ಈಗ ಸಣ್ಣ ನಗರಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ.

ದುಬಾರಿ ಕಾರು ತಯಾರಕ ಲಂಬೋರ್ಗಿನಿ ಚಿತ್ತ ಸಣ್ಣ ನಗರಗಳತ್ತ
Lamborghini eyes Tier I Tier II cities for biz growth in India

By

Published : Mar 12, 2023, 4:48 PM IST

ನವದೆಹಲಿ : ಭಾರತದ ದೊಡ್ಡ ಮಹಾನಗರಗಳಲ್ಲಿ ತನ್ನ ಹೆಜ್ಜೆಯೂರಿರುವ ಇಟಲಿಯ ಕಾರು ತಯಾರಕ ಕಂಪನಿ ಲಂಬೋರ್ಗಿನಿ ಈಗ ದೇಶದ ಎರಡು ಮತ್ತು ಮೂರನೇ ಹಂತದ ನಗರಗಳತ್ತ ತನ್ನ ಚಿತ್ತ ನೆಟ್ಟಿದೆ. ಮಾರಾಟ ಸಂಖ್ಯೆಯನ್ನು ವೃದ್ಧಿಸಿಕೊಳ್ಳಲು ಸಣ್ಣ ನಗರಗಳತ್ತ ಗಮನಹರಿಸಿರುವುದಾಗಿ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶದ ದೃಢ ಹಾಗೂ ಸುಸ್ಥಿರ ಆರ್ಥಿಕ ಬೆಳವಣಿಗೆಯ ಕಾರಣದಿಂದ ಯಶಸ್ವಿ ನವೋದ್ಯಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ ಭವಿಷ್ಯದ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಸಾರಿಗೆ ಮೂಲಭೂತ ವ್ಯವಸ್ಥೆಗಳು ಯುದ್ಧೋಪಾದಿಯಲ್ಲಿ ಅಭಿವೃದ್ಧಿಯಾಗುತ್ತಿವೆ. ಹೀಗಾಗಿ ದೇಶದಲ್ಲಿ ತನ್ನ ವ್ಯಾಪಾರ ವಹಿವಾಟು ವಿಸ್ತರಿಸಲು ಸುಪರ್ ಸ್ಪೋರ್ಟ್ಸ್ ಶ್ರೇಣಿಯ ಬಲು ದುಬಾರಿ ಕಾರುಗಳನ್ನು ತಯಾರಿಸುವ ಲಂಬೋರ್ಗಿನಿ ಮುಂದಾಗಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಲಂಬೋರ್ಗಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್, ಕೆಲವು ವರ್ಷಗಳ ಹಿಂದೆ ಬೇಡಿಕೆಯು ದೊಡ್ಡ ನಗರಗಳು ಮತ್ತು ಮಹಾನಗರಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿತ್ತು, ಆದರೆ ಈಗ ಅದು ಎಲ್ಲ ಕಡೆಗೂ ವಿಸ್ತಾರವಾಗುತ್ತಿದೆ. ನಾವು ಒಂದು ಕಾರ್ಯಯೋಜನೆಯನ್ನು ಹಾಕಿಕೊಂಡಿದ್ದೇವೆ ಮತ್ತು ಅದರ ಪ್ರಕಾರ ದೇಶದ 100 ನಗರಗಳಲ್ಲಿ ಸಂಭವನೀಯ ಗ್ರಾಹಕರನ್ನು ಸಂಪರ್ಕಿಸಿದ್ದೇವೆ. ಇಂದು ಭಾರತದ 50 ನಗರಗಳಲ್ಲಿ ನಿಮಗೆ ಲಂಬೋರ್ಗಿನಿ ಕಾರು ಕಾಣಿಸುತ್ತವೆ ಮತ್ತು ಈ ಶ್ರೇಣಿ I ಮತ್ತು ಶ್ರೇಣಿ II ನಗರಗಳು ಈಗ ನಮ್ಮ ವ್ಯಾಪಾರದ ಶೇ 25 ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಆದ್ದರಿಂದ ಈ ನಗರಗಳು ನಮಗೆ ಬಹಳ ಮುಖ್ಯವಾಗಿವೆ ಎಂದು ಅವರು ಹೇಳಿದರು.

ಲಂಬೋರ್ಗಿನಿ 2007 ರಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ ಕಾರು ಮಾರಾಟ ಆರಂಭಿಸಿತು. ಕಳೆದ ವರ್ಷ ಭಾರತದಲ್ಲಿ 92 ಕಾರು ಮಾರಾಟ ಮಾಡಲಾಗಿದೆ. 2021 ರಲ್ಲಿ 69 ಕಾರು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಮಾರಾಟದಲ್ಲಿ ಶೇ 33 ರಷ್ಟು ಬೆಳವಣಿಗೆಯಾಗಿದೆ. ಇಟಾಲಿಯನ್ ಬ್ರ್ಯಾಂಡ್ ಲಂಬೋರ್ಗಿನಿ ಮೂರು ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತದೆ. ಅವು: ಪ್ರೀಮಿಯಂ SUV ಉರುಸ್ ಮತ್ತು ಎರಡು ಸೂಪರ್ ಸ್ಪೋರ್ಟ್ಸ್ ಕಾರುಗಳಾದ Huracan Tecnica ಮತ್ತು Aventador. ಲಂಬೋರ್ಗಿನಿ ಕಾರಿನ ಆರಂಭಿಕ ಬೆಲೆ 3 ಕೋಟಿ ರೂಪಾಯಿ.

ಅಮೃತಸರ, ಶಿಲ್ಲಾಂಗ್, ಲಕ್ನೋ, ಉಡುಪಿ ಮತ್ತು ಅಜ್ಮೀರ್‌ನಂತಹ ಸ್ಥಳಗಳಲ್ಲಿ ಕೂಡ ಈಗ ಲಂಬೋರ್ಗಿನಿ ಕಾರುಗಳ ಗ್ರಾಹಕರಿದ್ದಾರೆ. ಅಂದರೆ ಲಂಬೋರ್ಗಿನಿ ಈಗ ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಬಹಳಷ್ಟು ನವೋದ್ಯಮಿಗಳು ನಮ್ಮ ಕಾರು ಖರೀದಿಸುತ್ತಿದ್ದಾರೆ. ಮಹಿಳೆಯರು ಕೂಡ ನಮ್ಮ ಕಾರು ಖರೀದಿಸುತ್ತಿದ್ದಾರೆ. ಭಾರತದಲ್ಲಿ ಒಟ್ಟು ಮಾರಾಟವಾದ ಲಂಬೋರ್ಗಿನಿ ಕಾರುಗಳ ಪೈಕಿ ಶೇ 60 ರಷ್ಟು ಲಕ್ಷುರಿ ಸ್ಪೋರ್ಟ್ಸ್​ ಯುಟಿಲಿಟಿ ವೆಹಿಕಲ್ ಉರುಸ್ ಆಗಿದೆ ಎಂದು ಅಗರ್ವಾಲ್ ಹೇಳಿದರು.

ನಾವು ದೇಶದ ಭಗೋಳಿಕತೆಯನ್ನು ನೋಡಿದರೆ, ಈಗ ಶ್ರೀಮಂತಿಕೆ ಎಂಬುದು ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಒಟ್ಟಾರೆ ಸನ್ನಿವೇಶವು ಬದಲಾಗುತ್ತಿದೆ. ಜನರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದಾರೆ ಮತ್ತು ಅವರು ಅದೇ ರೀತಿಯ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಅಗರ್ವಾಲ್ ತಿಳಿಸಿದರು.

ಇದನ್ನೂ ಓದಿ: ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್

ABOUT THE AUTHOR

...view details