ನವದೆಹಲಿ: ದೃಢವಾದ ಜಿಡಿಪಿ ದೃಷ್ಟಿಕೋನ, ಮಧ್ಯಮ ಪ್ರಮಾಣದ ಹಣದುಬ್ಬರ ಮತ್ತು ವಿದೇಶಿ ಹೂಡಿಕೆದಾರರ ಬಲವಾದ ಖರೀದಿಗಳು ಸೇರಿದಂತೆ ವಿವಿಧ ಸಕಾರಾತ್ಮಕ ಅಂಶಗಳಿಂದಾಗಿ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಬೆಳಗ್ಗೆ ಸ್ವಲ್ಪಮಟ್ಟಿಗೆ ಏರಿಕೆ ಕಂಡವು. ಈ ಬೆಳವಣಿಗೆ ಹೂಡಿಕೆದಾರರಿಗೆ ಆಶಾದಾಯಕವಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿವೆ.
ಪ್ರಸ್ತುತ ಸಮಯದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 0.1 ರಿಂದ 0.2 ರಷ್ಟು ಹೆಚ್ಚಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಬಡ್ಡಿದರವನ್ನು ಹೆಚ್ಚಿಸಿದ ನಂತರ ಅಂತಿಮವಾಗಿ ಬಡ್ಡಿದರ ಏರಿಸುವ ಕ್ರಮಕ್ಕೆ ವಿರಾಮ ನೀಡಿದ ಅಮೆರಿಕದ ಸೆಂಟ್ರಲ್ ಬ್ಯಾಂಕ್ ನೀತಿ ಕೂಡ ಹೂಡಿಕೆದಾರರಲ್ಲಿ ಭರವಸೆ ಹುಟ್ಟಿಸಿದೆ.
ಅಮೆರಿಕ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ಸಮಿತಿಯು ಬುಧವಾರದ ತನ್ನ ಇತ್ತೀಚಿನ ಸಭೆಯಲ್ಲಿ ಪ್ರಮುಖ ಬಡ್ಡಿದರವನ್ನು ಸ್ಥಿರವಾಗಿರಿಸಿದೆ. ಪಾಲಿಸಿ ದರವನ್ನು 5.0 ರಿಂದ 5.25 ಪ್ರತಿಶತದಲ್ಲಿ ನಿರ್ವಹಿಸಲಾಗಿದೆ. ಇದು ಕೋವಿಡ್-19 ನ ಆರಂಭಿಕ ಸಮಯದಲ್ಲಿ ಬಹುತೇಕ ಶೂನ್ಯದ ಸಮೀಪದಲ್ಲಿತ್ತು. ಇತ್ತೀಚಿನ ವಿರಾಮವನ್ನು ಹೊರತುಪಡಿಸಿದರೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸತತ ಹತ್ತನೇ ಬಾರಿಗೆ ಬಡ್ಡಿದರವನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು.
"ಸದ್ಯದ ಷೇರು ಮಾರುಕಟ್ಟೆಯ ರ್ಯಾಲಿಯು ಕಳೆದ ಶುಕ್ರವಾರ ಮುಕ್ತಾಯದ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು ಮತ್ತು ಈಗ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪುವ ಸನಿಹದಲ್ಲಿದೆ. ನಿಫ್ಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟ 18,887 ಆಗಿದೆ. ಈಗ ಮಾರುಕಟ್ಟೆಯಲ್ಲಿ ಎರಡು ಗಮನಾರ್ಹ ಪ್ರವೃತ್ತಿಗಳಿವೆ: ಒಂದು, ಈ ರ‍್ಯಾಲಿಯು ವಿಶಾಲ ವಲಯಗಳ ಮೇಲೆ ಆಧಾರಿತವಾಗಿದೆ. ಅಂದರೆ ಲಾರ್ಜ್ ಕ್ಯಾಪ್ ಐಟಿ ಹೊರತುಪಡಿಸಿ ಹೆಚ್ಚಿನ ವಲಯಗಳ ಭಾಗವಹಿಸುವಿಕೆ. ಎರಡನೆಯದಾಗಿ, ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳು ಲಾರ್ಜ್ ಕ್ಯಾಪ್‌ಗಳನ್ನು ಮೀರಿಸುತ್ತಿವೆ" ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.