ನವದೆಹಲಿ: ತನ್ನ ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಪ್ರಯತ್ನವಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ ಸತತ ಎರಡನೇ ವರ್ಷ 11 ದಿನಗಳ "ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್" ಅನ್ನು ಘೋಷಿಸಿದೆ. ಕಂಪನಿಯ ಎಲ್ಲ ಉದ್ಯೋಗಿಗಳಿಗೂ ಇದು ಅನ್ವಯವಾಗಲಿದೆ.
ಹಬ್ಬದ ಋತುವಿನಲ್ಲಿ ಬಿಡುವಿಲ್ಲದ ಮಾರಾಟದ ನಂತರ ಉದ್ಯೋಗಿಯು ಕೆಲಸದಿಂದ ಸಂಪೂರ್ಣವಾಗಿ ದೂರವಾಗಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕಂಪನಿಯು 11 ದಿನಗಳ ಬಿಡುವು ನೀಡುತ್ತಿದೆ ಎಂದು ಕಂಪನಿಯ ವೆಬ್ಸೈಟ್ನಲ್ಲಿ ಬರೆಯಲಾಗಿದೆ.
ಮೀಶೋ ಸಂಸ್ಥಾಪಕ ಮತ್ತು ಸಿಟಿಒ ಸಂಜೀವ್ ಬರ್ನ್ವಾಲ್ ಅವರು ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದಿದ್ದು, ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲಸ ಮತ್ತು ಜೀವನದ ಮಧ್ಯೆ ಸಮತೋಲನ ಅತ್ಯಗತ್ಯ ಎಂದು ಹೇಳಿದ್ದಾರೆ.
ನಾವು ಸತತ ಎರಡನೇ ವರ್ಷ 11 ದಿನದ ವಿರಾಮ ಘೋಷಿಸಿದ್ದೇವೆ. ಹಬ್ಬದ ಋತು ಹಾಗೂ ಕೆಲಸ ಮತ್ತು ಜೀವನದ ಮಧ್ಯೆ ಸಮತೋಲನಗಳನ್ನು ಗಮನದಲ್ಲಿಟ್ಟುಕೊಂಡು ಮೀಶೋ ಉದ್ಯೋಗಿಗಳಿಗೆ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್ ನೀಡಲಾಗುತ್ತಿದೆ ಎಂದು ಸಿಟಿಓ ಸಂಜೀವ್ ಬರ್ನ್ವಾಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ನೀಡಲಾಗುವ ಈ ರಜೆಯ ಕಾರಣದಿಂದ ಅವರ ವೇತನದಲ್ಲಿ ಯಾವುದೇ ಕಡಿತವಾಗುವುದಿಲ್ಲ. ಅಲ್ಲದೇ ಅವರಿಗೆ ಸಹಜವಾಗಿ ಸಿಗುವ ರಜೆಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಮೀಶೋ ಈ ಹಿಂದೆ ಗಡಿರಹಿತ ಕೆಲಸದ ಸ್ಥಳದ ಮಾದರಿ, ಅಗತ್ಯವಿದ್ದಷ್ಟು ಆರೋಗ್ಯ ರಜೆ, ಮಗುವಿನ ಪಾಲನೆಗೆ ಪೋಷಕರಿಗೆ 30 ವಾರಗಳ ರಜೆಗಳನ್ನು ಘೋಷಿಸಿತ್ತು.
ಇದನ್ನೂ ಓದಿ: ಹುಡುಗಿ ಹುಡುಕಲು 3 ದಿನ ರಜೆ ಕೊಡಿ! ಚಾಮರಾಜನಗರ ಪೊಲೀಸ್ ಸಿಬ್ಬಂದಿ ಲೀವ್ ಲೆಟರ್ ವೈರಲ್