ನವದೆಹಲಿ :ವಿಶ್ವದ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾಗಿರುವ ಭಾರತವು ಶುಕ್ರವಾರದಂದು (ಜೂ.9) 223 ಗಿಗಾವ್ಯಾಟ್ (GW) ಗಿಂತಲೂ ಹೆಚ್ಚು ವಿದ್ಯುತ್ ಅನ್ನು ಬಳಸಿದೆ. ಈ ಬೇಸಿಗೆಯಲ್ಲಿ ದೇಶದ ವಿದ್ಯುತ್ ಬೇಡಿಕೆಯು ಗರಿಷ್ಠ 229 GW (ಗಿಗಾವ್ಯಾಟ್) ಗೆ ತಲುಪಲಿದೆ ಎಂದು ಏಪ್ರಿಲ್ನಲ್ಲಿಯೇ ವಿದ್ಯುತ್ ಸಚಿವಾಲಯ ಅಂದಾಜಿಸಿತ್ತು. ಅದರಂತೆ ಇದೇ ಜೂನ್ 9 ರಂದು ವಿದ್ಯುತ್ ಪೂರೈಕೆಯು ಅತ್ಯಧಿಕ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 223.23 GW ಗೆ ತಲುಪಿದೆ. ಇದು ಬಳಕೆಯ ಮೇಲೆ ಅಕಾಲಿಕ ಮಳೆಯ ಪರಿಣಾಮ ಕ್ಷೀಣಿಸುತ್ತಿರುವುದನ್ನು ಸೂಚಿಸುತ್ತದೆ ಎಂದು ಸರ್ಕಾರಿ ಅಂಕಿಅಂಶಗಳು ತೋರಿಸಿವೆ.
ಅಕಾಲಿಕ ಮಳೆಯ ಕಾರಣದಿಂದ ತಾಪಮಾನ ಕಡಿಮೆಯಾಗಿ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಿತ್ತು. ಆದರೆ ಮುಂಬರುವ ಬೇಸಿಗೆಯ ನಿರೀಕ್ಷೆಯಿಂದ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಮಾರ್ಚ್ 16, 2023 ರಿಂದ ಜೂನ್ 15, 2023 ರವರೆಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ವಿದ್ಯುತ್ ಸಚಿವಾಲಯವು ಮೊದಲೇ ಸೂಚಿಸಿತ್ತು. ದೇಶದಲ್ಲಿ ವಿದ್ಯುಚ್ಛಕ್ತಿಗೆ ಉಂಟಾಗಬಹುದಾದ ಅತ್ಯಧಿಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ನಿರ್ದೇಶನ ನೀಡಿತ್ತು.
ಇದಲ್ಲದೆ ಯಾವುದೇ ರೀತಿಯಿಂದ ಕಲ್ಲಿದ್ದಲು ಕೊರತೆಯಾಗದಂತೆ ಸಾಕಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ಸಚಿವಾಲಯವು ದೇಶೀಯ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸೂಚಿಸಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 215.97GW ಮತ್ತು ಮೇ ತಿಂಗಳಲ್ಲಿ 221.34GW ಆಗಿತ್ತು ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಏಪ್ರಿಲ್‌ನಲ್ಲಿ ಕೇವಲ 170 ಮೆಗಾವ್ಯಾಟ್ ಮತ್ತು ಮೇನಲ್ಲಿ 23 ಮೆಗಾವ್ಯಾಟ್ ಕೊರತೆಯಾಗಿದೆ. ಈ ಕೊರತೆಯು ತಾಂತ್ರಿಕ ಕಾರಣಗಳಿಂದ ಉಂಟಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.