ನವದೆಹಲಿ:ಪ್ರತಿವರ್ಷ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯದ ಕಾರು ಕಾರ್ಖಾನೆಯನ್ನು ಸ್ಥಾಪಿಸುವ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆ ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ. ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು 20 ಲಕ್ಷ ರೂಪಾಯಿಗಳಿಂದ ($24,400.66) ಪ್ರಾರಂಭವಾಗಲಿವೆ ಎಂದು ವರದಿ ತಿಳಿಸಿದೆ.
"ಟೆಸ್ಲಾ ತನ್ನ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ನಮ್ಮ ಬಳಿಗೆ ಬಂದಿದೆ ಮತ್ತು ಈ ಬಾರಿಯ ಸಮಾಲೋಚನೆಗಳು ಸಕಾರಾತ್ಮಕವಾಗಿರುತ್ತವೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ವಿಶೇಷವಾಗಿ ಇದು ಸ್ಥಳೀಯ ಉತ್ಪಾದನೆ ಮತ್ತು ರಫ್ತು ಎರಡನ್ನೂ ಒಳಗೊಂಡಿರುತ್ತದೆ" ಎಂದು ಸರ್ಕಾರಿ ಮೂಲವೊಂದು ತಿಳಿಸಿದೆ. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಮಾತುಕತೆಗಳನ್ನು ಮುನ್ನಡೆಸುತ್ತಿದೆ ಮತ್ತು ಎರಡೂ ಪಕ್ಷಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ 'ಒಳ್ಳೆಯ ಒಪ್ಪಂದ' ಮಾಡಿಕೊಳ್ಳಲು ಯತ್ನಿಸುತ್ತಿದೆ.
ಅಮೆರಿಕದಲ್ಲಿ ಮೋದಿ ಭೇಟಿ ಮಾಡಿದ್ದ ಮಸ್ಕ್:ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಕಳೆದ ತಿಂಗಳು ಅಮೆರಿಕದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ಮಸ್ಕ್ ತಾವು 'ಮೋದಿ ಅವರ ಅಭಿಮಾನಿ' ಎಂದು ಹೇಳಿದ್ದರು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಪ್ರಧಾನಿ ತಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದರು. ಅದಾಗಿ ಕೆಲ ದಿನಗಳ ನಂತರ ಟೆಸ್ಲಾ ಭಾರತದಲ್ಲಿ ಹೂಡಿಕೆ ಮಾಡುವ ವಿಷಯ ಮುನ್ನೆಲೆಗೆ ಬಂದಿದೆ.