ಬೆಂಗಳೂರು:ಸುಲಭವಾಗಿ ಸಾಲ ನೀಡಿ ಮರುಪಾವತಿಗೆ ಬೆದರಿಕೆ ಹಾಕಿ ಹಿಂಸಿಸುವ ಚೀನಾ ಸಾಲದ ಆ್ಯಪ್ಗಳ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿರುವ ಅಂತಹ ಆ್ಯಪ್ಗಳ ಕಚೇರಿಯ ಮೇಲೆ ಇಂದು ಇಡಿ ದಾಳಿ ಮಾಡಿ ಶೋಧ ನಡೆಸಿದೆ.
ಚೀನಾದ ನಿಯಂತ್ರಣದಲ್ಲಿರುವ ಆನ್‌ಲೈನ್ ಪಾವತಿ ಆ್ಯಪ್ಗಳಾದ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀಗಳ ಬೆಂಗಳೂರಿನ ಕಚೇರಿಗಳ ಮೇಲೆ ಇಡಿ ದಾಳಿ ಮಾಡಿದೆ. ಕರ್ನಾಟಕದ ರಾಜಧಾನಿಯಲ್ಲಿರುವ ಈ ಕಂಪನಿಗಳ ಆರು ಶಾಖೆಗಳಲ್ಲಿ ಶುಕ್ರವಾರದಿಂದಲೇ ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು, ಇಂದೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇಜರ್‌ಪೇ ಪ್ರೈವೇಟ್ ಲಿಮಿಟೆಡ್, ಕ್ಯಾಶ್‌ಫ್ರೀ, ಪೇಟಿಎಂ ಲಿಮಿಟೆಡ್ ಮತ್ತು ಚೀನಾದ ನಿಯಂತ್ರಣದಲ್ಲಿರುವ ಇತರ ಕಂಪನಿಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೆಲವೆಡೆ ಠೇವಣಿ ಇಡಲಾಗಿದ್ದ 17 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಜೊತೆಗೆ ಈ ಕಂಪನಿಗಳು ದೇಶದ ನಾಗರಿಕರ ನಕಲಿ ದಾಖಲೆಗಳನ್ನು ಬಳಸಿಕೊಂಡು ಅವರನ್ನು ಕಂಪನಿಯ ನಿರ್ದೇಶಕರನ್ನಾಗಿ ಬಿಂಬಿಸಿವೆ. ಇವುಗಳನ್ನು ಚೀನಾದಿಂದಲೇ ನಿಯಂತ್ರಿಸಲಾಗುತ್ತಿದೆ. ಸಾಲ ನೀಡಿದ ಬಳಿಕ ಅವರ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿವೆ ಎಂದು ಡಿಸಿ ಆರೋಪಿಸಿದೆ.
ದಾಳಿಗೆ ಒಳಗಾದ ಈ ಕಂಪನಿಗಳು ಮರ್ಚೆಂಟ್ ಐಟಿ ಅಥವಾ ಪಾವತಿ ಸೇವಾ ಕಂಪನಿಗಳು ಮತ್ತು ಬ್ಯಾಂಕ್‌ಗಳಿಗೆ ಲಿಂಕ್ ಮಾಡಿದ ಖಾತೆಗಳನ್ನು ಬಳಸಿಕೊಂಡು ಅಕ್ರಮವಾಗಿ ಹಣವನ್ನು ಸಂಗ್ರಹಿಸುತ್ತಿವೆ. ಖಾತೆಗಳಿಗೆ ನೀಡಲಾದ ವಿಳಾಸಗಳು ಕೂಡ ನಕಲಿಯಾಗಿವೆ ಎಂದು ಶೋಧದ ವೇಳೆ ಬಯಲಾಗಿದೆ.
ಏನಿವು ಚೀನಾ ಸಾಲದ ಆ್ಯಪ್ಗಳು:ಚೀನಾದಿಂದ ನಿಯಂತ್ರಿಸಲ್ಪಡುವ ಆ್ಯಪ್ಗಳು ಜನರಿಗೆ ಅಗತ್ಯವಿರದಿದ್ದರೂ ಸಾಲವಾಗಿ ಹಣವನ್ನು ಅವರ ಖಾತೆಗೇ ಜಮಾ ಮಾಡುತ್ತವೆ. ಬಳಿಕ ದುಬಾರಿ ಬಡ್ಡಿ ವಿಧಿಸಿ ಸಾಲ ಮರುಪಾವತಿಗೆ ಒತ್ತಾಯಿಸುತ್ತವೆ. ಹಲವು ಪ್ರಕರಣಗಳಲ್ಲಿ ಪಡೆದ ಸಾಲದ ಹಲವು ಪಟ್ಟು ಹಣ ಮರುಪಾವತಿ ಮಾಡಿದರೂ ಇನ್ನೂ ಹೆಚ್ಚಿನ ಹಣ ನೀಡುವಂತೆ ಒತ್ತಡ ಹಾಕಲಾಗಿದೆ. ಹಣ ಪಾವತಿ ಮಾಡದಿದ್ದರೆ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡಿ ಮಾನಹಾನಿ ಮಾಡಿದ ಪ್ರಕರಣಗಳೂ ನಡೆದಿವೆ.
ಸಾಲದ ಆ್ಯಪ್ಗಳ ಮೇಲೆ ಆರ್ಬಿಐ ನಿಯಮ:ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಆ್ಯಪ್ಗಳಿಗೆ ಕೆಲ ನಿಯಮಗಳನ್ನು ವಿಧಿಸಿದೆ. ಯಾವುದೇ ಆ್ಯಪ್ ನೇರವಾಗಿ ಗ್ರಾಹಕರಿಗೆ ಸಾಲ ಮಂಜೂರು ಮಾಡಲು ಅವಕಾಶ ನಿರಾಕರಿಸಿದೆ. ಆ್ಯಪ್ ಕಂಪನಿಗಳು ಜನರಿಗೆ ಸಾಲ ನೀಡಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಅಥವಾ ಮೈಕ್ರೊ ಫೈನಾನ್ಸ್ ಇನ್ಸ್ಟಿಟ್ಯೂಷನ್ಗಳ(ಎಂಎಫ್ಐ) ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕು ಎಂಬ ನಿಯಮ ವಿಧಿಸಿದೆ.
ಸಾಲ ನೀಡುವ ಯಾವುದೇ ಆ್ಯಪ್ ಕಂಪನಿಗಳೂ ಎನ್ಬಿಎಫ್ಸಿ ಮತ್ತು ಸಾಲಗಾರರ ನಡುವೆ ವೇದಿಕೆಯಾಗಿರಬೇಕು. ನೇರವಾಗಿ ಕಂಪನಿಗಳೇ ಜನರಿಗೆ ಸಾಲದ ಹಣ ನೀಡುವಂತಿಲ್ಲ ಎಂದು ಕರಾರು ವಿಧಿಸಿದೆ.
ಓದಿ:ಜುಲೈನಲ್ಲಿ ಗೂಗಲ್ಗೆ ಬಳಕೆದಾರರಿಂದ ದಾಖಲೆಯ 1,37,657 ದೂರು