ನವದೆಹಲಿ:ದೇಶ ಆರ್ಥಿಕತೆ ಬೆಳವಣಿಗೆ ದರವನ್ನು ಶೇ.6.5 ರಷ್ಟು ಸೂಚಿಸಿರುವ ಆರ್ಥಿಕ ಸಮೀಕ್ಷೆ, ನಿರುದ್ಯೋಗ ಸಮಸ್ಯೆಗೆ ಖಾಸಗಿ ವಲಯ ಬೂಸ್ಟರ್ ಆಗಲಿದೆ. ಈ ವರ್ಷ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆ ಕಂಡು ಖಾಸಗಿ ವಲಯ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ 2022-23 ನೇ(ಏಪ್ರಿಲ್ - ಮಾರ್ಚ್) ಸಾಲಿನ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ಆರ್ಥಿಕ ಸಮೀಕ್ಷೆ ನೀಡಿದೆ.
ಈ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಪ್ರಮುಖವಾಗಿ ಖಾಸಗಿ ವಲಯ ಮತ್ತು ಬಂಡವಾಳ ಹೂಡಿಕೆಗಳು ಮುನ್ನಡೆಸಲಿವೆ. ಹೆಚ್ಚುತ್ತಿರುವ ನಿರುದ್ಯೋಗ ದರ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ವೇಗದ ಬೆಳವಣಿಗೆ ಕಾಣುವಂತೆ ಇದು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ. ಎಂಎಸ್‌ಎಂಇಗಳ ಚೇತರಿಕೆಯು ವೇಗವಾಗಿರಲಿದೆ. ಪಾವತಿಯಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೊತ್ತದಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಎಮರ್ಜೆನ್ಸಿ ಕ್ರೆಡಿಟ್ ಲಿಂಕ್ಡ್ ಗ್ಯಾರಂಟಿ ಸ್ಕೀಮ್ (ECGLS) ನೀಡುವ ತನ್ನ ಸಾಲ ಸೇವೆ ನೀತಿ ಇನ್ನಷ್ಟು ಸರಳವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಉದ್ಯೋಗ ಸೃಷ್ಟಿ ಖಚಿತ:ಈ ವರ್ಷದಲ್ಲಿ ಅಧಿಕ ಉದ್ಯೋಗ ಸೃಷ್ಟಿಯಾಗಲಿವೆ ಎಂಬುದನ್ನು ಅಧಿಕೃತ ಮತ್ತು ಅನಧಿಕೃತ ಮೂಲಗಳು ತಿಳಿಸಿವೆ. ನಗರಗಳಲ್ಲಿ ಇರುವ ನಿರುದ್ಯೋಗ ಸಮಸ್ಯೆ ಈ ಬಾರಿ ತಗ್ಗಲಿದೆ. 2021 ರಲ್ಲಿ ಶೇ.9.8 ರಷ್ಟಿದ್ದ ನಿರುದ್ಯೋಗ ಸಮಸ್ಯೆ ಈ ವರ್ಷ ಅದು ಶೇ.7.2 ಕ್ಕೆ ಇಳಿಯಲಿದೆ. ಇದು 15 ವರ್ಷ ಮತ್ತು ಅದಕ್ಕಿಂತಲೂ ಅಧಿಕ ವಯೋಮಾನದವರಲ್ಲಿ ಇದು ಕಂಡುಬರಲಿದೆ ಎಂದು ಪೀರಾಯಡಿಕ್ ಲೇಬರ್ ಫೋರ್ಸ್ ಸರ್ವೆ ದೃಢೀಕರಿಸಿದೆ.