ಔರಂಗಾಬಾದ್ (ಮಹಾರಾಷ್ಟ್ರ): ಚಳಿಯ ದಿನಗಳಲ್ಲಿ ಸೇವಿಸಲು ಉತ್ತಮ ಪೌಷ್ಟಿಕ ಆಹಾರವಾಗಿರುವ ಖರ್ಜೂರ ಈಗ ಜನಸಾಮಾನ್ಯರ ಕೈಗೆಟುಕದ ಸ್ಥಿತಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಮಾರಾಟವಾಗುವ ಬಹುತೇಕ ಖರ್ಜೂರ ಪಾಕಿಸ್ತಾನದಿಂದ ಬರುತ್ತದೆ. ಆದರೆ, ಈಗ ಪಾಕಿಸ್ತಾನದಲ್ಲಿ ಅತಿವೃಷ್ಟಿಯಾಗುತ್ತಿರುವ ಕಾರಣದಿಂದ ಅಲ್ಲಿಂದ ಬರುವ ಖರ್ಜೂರದ ಪ್ರಮಾಣದಲ್ಲಿ ಶೇ 50 ರಷ್ಟು ಇಳಿಕೆಯಾಗಿದೆ. ಹೀಗಾಗಿ ಖರ್ಜೂರದ ದರವೂ ಏರಿಕೆಯಾಗುತ್ತಿದೆ.
ಭಾರತವು ದೊಡ್ಡ ಪ್ರಮಾಣದಲ್ಲಿ ಖರ್ಜೂರವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುತೇಕ ಸರಕು ಪಾಕಿಸ್ತಾನದಿಂದ ಬರುತ್ತದೆ. ಖರ್ಜೂರ ಬೆಳೆಯಲು ಪಾಕಿಸ್ತಾನದ ವಾತಾವರಣ ಅತಿ ಉತ್ತಮವಾಗಿರುವ ಕಾರಣದಿಂದ ಅಲ್ಲಿ ಹೆಚ್ಚು ಪ್ರಮಾಣದಲ್ಲಿ ಖರ್ಜೂರ ಬೆಳೆಯಲಾಗುತ್ತದೆ. ಭಾರತವು ಪ್ರತಿವರ್ಷ 75 ಸಾವಿರ ಟನ್ ಅಂದರೆ 17 ಸಾವಿರ ಲಾರಿಗಳಷ್ಟು ಖರ್ಜೂರವನ್ನು ಹೊರಗಿನಿಂದ ತರಿಸುತ್ತದೆ.
ಅದರಲ್ಲಿನ ಶೇ 20 ರಿಂದ 25 ರಷ್ಟು ಸರಕು ಮಹಾರಾಷ್ಟ್ರದ ಖರ್ಜೂರ ಮಾರುಕಟ್ಟೆಗೆ ಆಗಮಿಸುತ್ತದೆ. ರಾಜ್ಯಕ್ಕೆ ಪಾಕಿಸ್ತಾನದಿಂದ ಶೇ 80 ರಿಂದ 90ರಷ್ಟು ಖರ್ಜೂರ ಬರುತ್ತದೆ. ಇನ್ನುಳಿದ ಖರ್ಜೂರ ಮಸ್ಕತ್ ಹಾಗೂ ಓಮನ್ ದೇಶಗಳಿಂದ ಬರುತ್ತದೆ. ಈ ವರ್ಷ ಪಾಕಿಸ್ತಾನದಲ್ಲಿನ ಅತಿವೃಷ್ಟಿಯ ಕಾರಣದಿಂದ ಖರ್ಜೂರ ಬರುವುದು ಕಡಿಮೆಯಾಗಿದೆ.