ತೆಹ್ರಿ (ಉತ್ತರಾಖಂಡ): ರೆಸ್ಟೋರೆಂಟ್‌ನಲ್ಲಿ ಸಾಮಾನ್ಯ ವೇಟರ್ ಆಗಿದ್ದ ಉತ್ತರಾಖಂಡ ಮೂಲದ ದೇವ್ ರತೂರಿ ಈಗ ಚೀನಾದಲ್ಲಿ 10 ರೆಸ್ಟೋರೆಂಟ್‌ಗಳು ಆರಂಭಿಸುವ ಮೂಲಕ ಭಾರತೀಯರು ಮಾತ್ರವಲ್ಲದೇ ಚೀನಿಯರು ಸಹ ಹುಬ್ಬೇರಿಸುವಂತೆ ಮಾಡಿದ್ದಾರೆ. ಇವರ ಜೀವನಗಾಥೆಯನ್ನು ಚೀನಾದ ಪ್ರಾಚೀನ ರಾಜಧಾನಿ ಕ್ಸಿಯಾನ್‌ನಲ್ಲಿ 7ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.!
ಹೌದು, ಉತ್ತರಾಖಂಡದ ತೆಹ್ರಿ ಜಿಲ್ಲೆಯ ಮಿನಿ ಜಪಾನ್ ಎಂದೇ ಕರೆಯಲಾಗುವ ಘನ್ಸಾಲಿ ಬ್ಲಾಕ್‌ನ ಕೆಮರಿಯಾ ಸೌದ್ ಗ್ರಾಮದ ದೇವ್ ರತೂರಿ ಅತ್ಯಂತ ಸರಳ ಕುಟುಂಬದಿಂದ ಬಂದವರು. ಇವರ ಕುಟುಂಬವು ತುಂಬಾ ಬಡತನದಿಂದ ಕೂಡಿದ್ದರಿಂದ ಅವರಿಗೆ ಹತ್ತನೆಯ ನಂತರ ಓದಲು ಸಾಧ್ಯವಾಗಲಿಲ್ಲ. ಸಣ್ಣ ವಯಸ್ಸಿಗೆ ಜೀವನ ನಿರ್ವಹಣೆಗೆಂದು ಉದ್ಯೋಗ ಅರಿಸಿ ದೆಹಲಿಗೆ ತೆರಳಿದ್ದರು. ಅಲ್ಲಿ ರೆಸ್ಟೋರೆಂಟ್ವೊಂದರಲ್ಲಿ ಮಾಣಿ (ವೇಟರ್)ಯಾಗಿ ಕೆಲಸ ಮಾಡುತ್ತಿದ್ದರು.
ದೆಹಲಿಗೆ ತಲುಪಿದ ಆರಂಭದಲ್ಲಿ ದೇವ್ ರತೂರಿ ಮೂರು ವರ್ಷ ಹಾಲಿನ ಡೈರಿಯಲ್ಲಿ ದುಡಿಯುತ್ತಿದ್ದರು. ಆಗ ಕಟ್ಟಡ ನಿರ್ಮಾಣ ಕಂಪನಿಯೊಂದರ ಗುತ್ತಿಗೆದಾರರ ಜೊತೆ ವಾಸವಿದ್ದರು. ಇವರು ಮಾರ್ಷಲ್ ಆರ್ಟ್ ದಂತಕಥೆ, ನಟ ಬ್ರೂಸ್ ಲೀ ಅವರ ಅಭಿಮಾನಿಯಾಗಿದ್ದಾರೆ. ಹೀಗಾಗಿ ಮಾರ್ಷಲ್ ಆರ್ಟ್ಸ್ ಕೂಡ ಕಲಿತು ಬ್ರೌನ್ ಬೆಲ್ಟ್ ಪಡೆದಿದ್ದಾರೆ. ನಂತರ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆಂದು ಮುಂಬೈಗೆ ಹೋಗಿದ್ದರು. ನಟ ಪುನೀತ್ ಇಸ್ಸಾರ್ ಅವರು ದೇವ್ ರತೂರಿ ಅವರಿಗೆ ಅವಕಾಶವನ್ನೂ ಕೊಟ್ಟಿದ್ದರು. ಆದರೆ, ಕ್ಯಾಮರಾ ಮುಂದೆ ಹೆಚ್ಚು ದಿನಗಳು ಕಳೆಯಲು ಸಾಧ್ಯವಾಗದೇ ದೆಹಲಿಗೆ ಹಿಂತಿರುಗಿದ್ದರು.
ವೇಟರ್ ಆಗಿ ಚೀನಾಕ್ಕೆ ಪ್ರಯಣ:ಮುಂಬೈಯಿಂದ ವಾಪಸ್ ಬಂದ ದೇವ್ ರತೂರಿ ಬಳಿಕ ದೆಹಲಿಯ ರೆಸ್ಟೊರೆಂಟ್‌ನಲ್ಲಿ ಮೂರು ತಿಂಗಳ ಕಾಲ ವೇಟರ್ ಕೆಲಸ ಆರಂಭಿಸಿ, ಅಲ್ಲಿಯೇ ತರಬೇತಿಯನ್ನು ಪಡೆದರು. ವೇಟರ್ ಆಗಿ ಹಾಂಕಾಂಗ್ ಮೂಲಕ ಚೀನಾಕ್ಕೆ ತಲುಪಿದರು. ಇಲ್ಲಿ ಚೈನೀಸ್ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿಯೇ ಜೀವನವನ್ನು ಮುನ್ನೆಡೆಸಿದರು. ಕೇವಲ 6 ತಿಂಗಳಲ್ಲಿ ಚೈನೀಸ್ ಕಲಿತುಕೊಂಡರು. ಜೊತೆಗೆ ಜರ್ಮನ್ ಮತ್ತು ಆಸ್ಟ್ರೇಲಿಯನ್ ರೆಸ್ಟೋರೆಂಟ್‌ಗಳಲ್ಲಿ ಮ್ಯಾನೇಜರ್‌ನಿಂದ ಹಿಡಿದು ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಾ ಕ್ರಮೇಣ ಪ್ರಗತಿಯು ಶಿಖರವನ್ನು ತಲುಪಿದರು.
2005ರಲ್ಲಿ ಚೀನಾದ ಪ್ರಾಚೀನ ರಾಜಧಾನಿ ಕ್ಸಿಯಾನ್ ತಲುಪಿದಾಗ ವೇಟರ್ ಆಗಿದ್ದ ದೇವ್ ರತೂರಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು. ಹೀಗಾಗಿ 2011ರಲ್ಲಿ ಅವರು ಕ್ಸಿಯಾನ್‌ನಲ್ಲಿ ರೆಡ್ ಫೋರ್ಟ್ ಎಂಬ ತಮ್ಮ ಸ್ವಂತ ರೆಸ್ಟೋರೆಂಟ್ ಆರಂಭಿಸಿದರು. ಈ ರೆಸ್ಟೋರೆಂಟ್‌ನಲ್ಲಿ ಭಾರತೀಯ ಆಹಾರ ಪದ್ಧತಿ ಮತ್ತು ಭಾರತೀಯ ಸಂಸ್ಕೃತಿಯನ್ನೇ ಸಂಪೂರ್ಣವಾಗಿ ಅಳವಡಿಸಿಕೊಂಡರು. ಅಲ್ಲಿಂದ ಶುರುವಾದ ರೆಸ್ಟೋರೆಂಟ್ ಉದ್ಯಮ ಈಗ ಬೀಜಿಂಗ್ ಮತ್ತು ವುಹಾನ್ಗೂ ಹಬ್ಬಿದೆ. ಒಟ್ಟಾರೆ 10 ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಸುಮಾರು 70 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು, ಇದರಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ತಮಿಳುನಾಡು ಸೇರಿ ಹೆಚ್ಚಿನ ಸಿಬ್ಬಂದಿ ಭಾರತೀಯರೇ ಆಗಿದ್ದಾರೆ. 2025ರ ವೇಳೆಗೆ 200ಕ್ಕೂ ಹೆಚ್ಚು ಭಾರತೀಯರಿಗೆ ಉದ್ಯೋಗ ಒದಗಿಸಬೇಕೆಂಬ ಗುರಿಯನ್ನು ಇವರು ಹೊಂದಿದ್ದಾರೆ.