ನವದೆಹಲಿ: ಭಾರತದಲ್ಲಿ ವಾಸ್ತವ ಎಂದರೆ ಭ್ರಷ್ಟಾಚಾರ, ಕೊಳಕು ರಸ್ತೆಗಳು ಮತ್ತು ಮಾಲಿನ್ಯ ಎಂದು ಈ ಹಿಂದೆ ಇನ್ಫೊಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಜರಿದಿದ್ದರು. ಈಗ ರಾಷ್ಟ್ರ ರಾಜಧಾನಿ ದೆಹಲಿ ಕುರಿತು ಕೆಲವೊಂದು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಉದಾಹರಣೆಯನ್ನು ಉಲ್ಲೇಖಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು, ನನಗೆ ದೆಹಲಿಗೆ ಬರಲು ಅನಾನುಕೂಲವಾಗಿದೆ. ಏಕೆಂದರೆ ಇದು ಅಶಿಸ್ತು ಅತಿ ಹೆಚ್ಚು ಇರುವ ನಗರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಎಐಎಂಎ) ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮೂರ್ತಿ, ಸಾರ್ವಜನಿಕ ಆಡಳಿತದಲ್ಲಿ ಅಪ್ರಾಮಾಣಿಕತೆಯ ಸಮಸ್ಯೆಗಳನ್ನು ತಪ್ಪಿಸಲು ಜನರು ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಮೌಲ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂದ ಅವರು, ದೆಹಲಿಗೆ ಬರಲು ನನಗೆ ತುಂಬಾ ಅನಾನುಕೂಲವಾಗಿದೆ. ಇದು ಅಶಿಸ್ತು ಹೆಚ್ಚಾಗಿರುವ ನಗರ. ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ನಾನು ನಿನ್ನೆ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದೆ. ಈ ವೇಳೆ ಟ್ರಾಫಿಕ್ ಸಿಗ್ನಲ್ವೊಂದರ ಬಳಿ ರೆಡ್ ಸಿಗ್ನಲ್ ಹಾಕಿತ್ತು. ಆದರೆ ಆ ಸಮಯದಲ್ಲಿ ಕಾರು, ಬೈಕ್ ಮತ್ತು ಸ್ಕೂಟರ್ ಚಾಲಕರು ಯಾವುದೇ ಟ್ರಾಫಿಕ್ ನಿಯಮವನ್ನು ಪಾಲಿಸದೆ ಸಿಗ್ನಲ್ ಜಂಪ್ ಮಾಡುತ್ತಿದ್ದರು ಎಂಬುದನ್ನು ವಿವರಿಸಿದರು.
ಟ್ರಾಫಿಕ್ ಸಿಗ್ನಲ್ ಬಳಿ ನಾವು ಒಂದೆರಡು ನಿಮಿಷ ಕಾಯಲು ಸಾಧ್ಯವಿಲ್ಲ. ಅವರ ಬಳಿ ಹಣವಿದ್ದರೆ ಅವರು ಕಾಯುತ್ತಾರೆ ಎಂದು ನೀವು ಭಾವಿಸುತ್ತೀರಾ? ಖಂಡಿತ ಅವರು ಕಾಯುವುದಿಲ್ಲ. ಈ ವಿಷಯಗಳನ್ನು ನಮ್ಮ ಮಕ್ಕಳಿಗೆ ಕಲಿಸಿ, ಸರಿ ದಾರಿಯಲ್ಲಿ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.
ಓದಿ:ಗ್ಯಾಂಬಿಯಾದಲ್ಲಿ ಭಾರತ ಉತ್ಪಾದಿಸಿದ ಸಿರಪ್‌ನಿಂದ 66 ಮಕ್ಕಳ ಸಾವು, ದೊಡ್ಡ ಅವಮಾನ: ನಾರಾಯಣಮೂರ್ತಿ