ಕರ್ನಾಟಕ

karnataka

Explainer: ಸೈಬರ್ ವಿಮೆ, ಅಗತ್ಯ ಮತ್ತು ಉಪಯೋಗಗಳು

By

Published : Apr 3, 2023, 7:08 PM IST

ಇತ್ತೀಚೆಗೆ ನಮ್ಮ ಎಲ್ಲ ವೈಯಕ್ತಿಕ ಮಾಹಿತಿಯು ಕಂಪ್ಯೂಟರ್ ಮತ್ತು ಪೋನ್​ಗಳಲ್ಲಿ ಶೇಖರಣೆಯಾಗಿರುತ್ತದೆ. ಹೀಗಿರುವಾಗ ನಮ್ಮ ಮಾಹಿತಿಯನ್ನು ಕಳವು ಮಾಡಿ ಅದನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸೈಬರ್ ವಿಮೆ ನಿಮ್ಮ ರಕ್ಷಣೆಗೆ ಬೇಕಾಗುತ್ತದೆ.

Cyber insurance a blessing in disguise
Cyber insurance a blessing in disguise

ಹೈದರಾಬಾದ್:ತಂತ್ರಜ್ಞಾನದಲ್ಲಿ ಬೆಳವಣಿಗೆಯಾದಂತೆ ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಕಂಪ್ಯೂಟರ್ ಮತ್ತು ಫೋನ್​ಗಳಲ್ಲಿ ಶೇಖರಿಸಿ ಇಡುವುದು ಹೆಚ್ಚಾಗುತ್ತಿದೆ. ಆದರೆ ಕೆಲ ಅನಿರೀಕ್ಷಿತ ಸಂದರ್ಭಗಳಲ್ಲಿ ಇಂಥ ಮಾಹಿತಿಯು ಸೈಬರ್ ಅಪರಾಧಿಗಳ ಕೈಗೆ ಸಿಗಬಹುದು. ಹೀಗೆ ಡೇಟಾ ಸಿಕ್ಕಾಗ ಸೈಬರ್ ಅಪರಾಧಿಗಳು ಡೇಟಾವನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಖಾತೆಯಿಂದ ಹಣವನ್ನು ಎಗರಿಸುವ ಸಾಧ್ಯತೆಗಳಿರುತ್ತವೆ. ಇಂಥ ಯಾವುದೇ ಸಮಸ್ಯೆ ಎದುರಾದಾಗ ತೊಂದರೆಗೆ ಸಿಲುಕದಿರಲು ಸೈಬರ್ ವಿಮಾ ಪಾಲಿಸಿ ತೆಗೆದುಕೊಳ್ಳುವುದು ವರದಾನವಾಗಿದೆ.

ಕಂಪ್ಯೂಟರ್ ಮತ್ತು ಫೋನ್ ಬಳಸುವಾಗ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ, ಸೈಬರ್ ಕಳ್ಳರು ಹೊಸ ರೀತಿಯ ವಂಚನೆಯೊಂದಿಗೆ ಡೇಟಾ ಕದಿಯುತ್ತಿದ್ದಾರೆ. ಇಂಥ ವಂಚನೆಯಿಂದ ಪಾರಾಗಲು ನಾವು ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಸರಿಯಾದ ಸಾಫ್ಟ್‌ವೇರ್ ಅನ್ನು ಇನ್​ಸ್ಟಾಲ್ ಮಾಡಿರಬೆಕು. ಇದರ ಜೊತೆಗೆ ಸೈಬರ್ ವಿಮಾ ಪಾಲಿಸಿಯನ್ನು ತೆಗೆದುಕೊಂಡರೆ ನೀವು ಬಹುತೇಕ ಸುರಕ್ಷಿತವಾಗಿರಬಹುದು. 18 ವರ್ಷ ಮೇಲ್ಪಟ್ಟ ಯಾರಾದರೂ ಈ ವಿಮೆಯನ್ನು ಪಡೆಯಬಹುದು. 1 ಲಕ್ಷದಿಂದ 1 ಕೋಟಿ ರೂ.ವರೆಗೆ ಪಾಲಿಸಿ ತೆಗೆದುಕೊಳ್ಳಬಹುದು. ಇಂಥ ಪಾಲಿಸಿಗಳನ್ನು ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕೆಂಬುದನ್ನು ನೋಡೋಣ ಬನ್ನಿ.

ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳಿಗೆ ಸೈಬರ್ ವಿಮೆ: ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವಿಷಯದಲ್ಲಿ ಸೈಬರ್ ವಿಮಾ ಭದ್ರತಾ ಕವರ್ ಅನ್ವಯಿಸುತ್ತದೆಯೇ ಎಂಬುದನ್ನು ಪರಿಶೀಲಿಸಿದ ನಂತರವೇ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ, KYC ನಿಯಮಗಳನ್ನು ಪಾಲಿಸದ ಕಾರಣದಿಂದ ನಿಮ್ಮ ಬ್ಯಾಂಕ್ ಖಾತೆ/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅನ್ನು ನಿರ್ಬಂಧಿಸಲಾಗುತ್ತದೆ ಎಂಬ ಸಂದೇಶಗಳು ಬರುತ್ತವೆ. ಇನ್ನು ಕೆಲವೊಮ್ಮೆ ಇಮೇಲ್ ಅಥವಾ ಮೆಸೇಜ್​ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಖಾತೆ ಅಥವಾ ಕಾರ್ಡ್‌ನಿಂದ ಹಣ ಮಾಯವಾಗುತ್ತದೆ. ಇಂಥ ಸಂದರ್ಭಗಳಲ್ಲಿ ವಿಮಾ ಪಾಲಿಸಿಯು ಹಣಕಾಸಿನ ನಷ್ಟವನ್ನು ಭರಿಸುತ್ತದೆ.

ಐಡೆಂಟಿಟಿ ದುರುಪಯೋಗದ ಸಂದರ್ಭದಲ್ಲಿ : ಫೋನ್ ಅಥವಾ ಕಂಪ್ಯೂಟರ್ ಗಳಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿಯನ್ನು ಕದ್ದು ಅದರ ಮೂಲಕ ವಂಚನೆ ಮಾಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸೈಬರ್ ಪಾಲಿಸಿ ನಿಮ್ಮನ್ನು ರಕ್ಷಿಸುವಂತಿರಬೇಕು. ಉದಾಹರಣೆಗೆ, ಸೈಬರ್ ವಂಚಕರು ವ್ಯಕ್ತಿಯ ಪ್ಯಾನ್ ಅಥವಾ ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾವಿಸೋಣ. ಆಗ ಸಂಭವಿಸುವ ಆರ್ಥಿಕ ನಷ್ಟವನ್ನು ವಿಮಾ ಕಂಪನಿ ಭರಿಸಬೇಕಾಗುತ್ತದೆ. ವಿಮೆ ತೆಗೆದುಕೊಳ್ಳುವಾಗ ಇದನ್ನು ಪರಿಶೀಲಿಸಬೇಕು.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ : ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಂದ ಗುರುತಿನ ವಿವರಗಳನ್ನು ತೆಗೆದುಕೊಂಡು ಸೈಬರ್ ದಾಳಿಗೆ ಒಳಗಾಗಿದ್ದರೆ, ನಿಮ್ಮ ಸೈಬರ್ ವಿಮಾ ಪಾಲಿಸಿಯು ಇದನ್ನು ಭರಿಸಬೇಕು. ವೈಯಕ್ತಿಕ ಕಿರುಕುಳದ ಸಂದರ್ಭದಲ್ಲಿ ತಗಲುವ ವೆಚ್ಚಕ್ಕೂ ಪರಿಹಾರ ನೀಡಬೇಕು.

ಮಾಲ್‌ವೇರ್‌ನಿಂದ ರಕ್ಷಣೆ: ಶಾರ್ಟ್​ ಮೆಸೇಜುಗಳು ಅಥವಾ ಇ-ಮೇಲ್‌ಗಳ ಮೂಲಕ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಪ್ರವೇಶಿಸುವ ಮಾಲ್‌ವೇರ್ ಮೂಲಕ ನಮ್ಮ ಸಾಧನಗಳಿಂದ ಮಾಹಿತಿಯು ಇತರರ ಕೈಗೆ ಹೋಗಬಹುದು. ಸಾಮಾನ್ಯವಾಗಿ ಸೈಬರ್ ಕಳ್ಳರು ಬಳಕೆದಾರರ ಹೆಸರುಗಳು, ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಉಂಟಾದ ಎಲ್ಲ ನಷ್ಟಗಳನ್ನು ವಿಮಾ ಪಾಲಿಸಿ ಭರಿಸುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಾಲ್‌ವೇರ್ ದಾಳಿಯ ಸಂದರ್ಭದಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಡೇಟಾವನ್ನು ಮರುಸ್ಥಾಪಿಸುವ ವೆಚ್ಚವನ್ನು ಸಹ ಸೈಬರ್ ವಿಮೆ ಪಾವತಿಸುತ್ತದೆ.

ಇನ್ನಿತರ ಸಂದರ್ಭಗಳಲ್ಲಿ:ಡಿಜಿಟಲ್ ಸಾಧನಗಳಲ್ಲಿ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದು, ಪರಿಣಾಮವಾಗಿ ಉಂಟಾಗುವ ಪರಿಣಾಮಗಳಿಗೆ ಪರಿಹಾರ, ಸೈಬರ್ ಅಪರಾಧಗಳಿಂದ ಉಂಟಾಗುವ ಯಾವುದೇ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಚಿಕಿತ್ಸೆ ಮತ್ತು ವೆಚ್ಚಗಳ ಪಾವತಿಯನ್ನು ಸಹ ಸೈಬರ್ ವಿಮೆ ಒಳಗೊಂಡಿರುತ್ತದೆ ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಟಿಎ ರಾಮಲಿಂಗಂ ಹೇಳುತ್ತಾರೆ.

ಇದನ್ನೂ ಓದಿ : ಆರ್ಥಿಕ ರಕ್ಷಣೆ ಒದಗಿಸಬಲ್ಲ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಬಗ್ಗೆ ತಿಳಿಯಿರಿ..

ABOUT THE AUTHOR

...view details