ಸ್ಯಾನ್ ಫ್ರಾನ್ಸಿಸ್ಕೋ: ಕ್ರಿಪ್ಟೋ ಮಾರುಕಟ್ಟೆ ವಹಿವಾಟು ಮೇ ತಿಂಗಳಲ್ಲಿ 32 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಎಲ್ಲಾ ಕ್ರಿಪ್ಟೋ ವಿನಿಮಯ ಕೇಂದ್ರಗಳಲ್ಲಿ ಸ್ಪಾಟ್ ಮಾರುಕಟ್ಟೆ ಪರಿಮಾಣವನ್ನು ಲೆಕ್ಕಾಚಾರ ಮಾಡುವ ದಿ ಬ್ಲಾಕ್‌ನ ಮಾಹಿತಿಯ ಪ್ರಕಾರ, ಕ್ರಿಪ್ಟೋಕರೆನ್ಸಿ ಮಾಸಿಕ ವಿನಿಮಯ ಪರಿಮಾಣ ಮೇ ತಿಂಗಳಲ್ಲಿ 439.42 ಬಿಲಿಯನ್ ಡಾಲರ್ ಆಗಿತ್ತು. ಇದು ಏಪ್ರಿಲ್‌ನಲ್ಲಿ ಇದ್ದ 604.88 ಶತಕೋಟಿ ಡಾಲರ್ಗಿಂತ 27 ಶೇಕಡಾ ಕಡಿಮೆಯಾಗಿದೆ. ಕಳೆದ ತಿಂಗಳ ಪರಿಮಾಣವು ಅಕ್ಟೋಬರ್ 2020 ರಲ್ಲಿ ಇದ್ದುದಕ್ಕಿಂತ 222.7 ಶತಕೋಟಿಯಷ್ಟು ಕಡಿಮೆ ಮಟ್ಟವಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಕಂಪನಿಯಾಗಿರುವ ಬಿನಾನ್ಸ್ ಮೇ ತಿಂಗಳಿನಲ್ಲಿ ಮಾಸಿಕ ವಿನಿಮಯದ ಪರಿಮಾಣದಲ್ಲಿ ಸುಮಾರು 218 ಶತಕೋಟಿ ಡಾಲರ್ ವಹಿವಾಟು ನಡೆಸಿದೆ. ಇದು ಹಿಂದಿನ ತಿಂಗಳಲ್ಲಿ ಆಗಿದ್ದ 293.83 ಶತಕೋಟಿ ಡಾಲರ್ ವಹಿವಾಟಿಗೆ ಹೋಲಿಸಿದರೆ ಶೇಕಡಾ 26 ರಷ್ಟು ಕುಸಿತವಾಗಿದೆ. ನಿಧಾನಗತಿಯ ಮಾರುಕಟ್ಟೆ ಮತ್ತು ಕಡಿಮೆ ಬೇಡಿಕೆಯ ಪರಿಣಾಮಗಳ ಹಿನ್ನೆಲೆಯಲ್ಲಿ ಭವಿಷ್ಯದ ಮಾರುಕಟ್ಟೆ ಹೇಗಿರಬಹುದು ಎಂಬ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಬಹುದು ಎಂಬ ಬಗ್ಗೆ ಕಂಪನಿ ಚಿಂತನೆ ನಡೆಸುತ್ತಿದೆ ಬಿನಾನ್ಸ್ ಹೇಳಿದೆ.
"ಕೇವಲ 30 ಉದ್ಯೋಗಿಗಳೊಂದಿಗೆ ಆರಂಭವಾದ ಬಿನಾನ್ಸ್ ಕಳೆದ ಆರು ವರ್ಷಗಳಲ್ಲಿ ಜಗತ್ತಿನಾದ್ಯಂತ ಸುಮಾರು 8,000 ಉದ್ಯೋಗಿಗಳ ತಂಡವಾಗಿ ಬೆಳೆದಿದೆ. ಆದರೆ ನಾವು ಮುಂದಿನ ಪ್ರಮುಖ ಏರಿಕೆಯ ಹಂತದ ವಿಷಯದಲ್ಲಿ ತಯಾರಿ ನಡೆಸುತ್ತಿರುವಾಗ ಸಂಸ್ಥೆಯಲ್ಲಿ ಪ್ರತಿಭಾವಂತ ಉದ್ಯೋಗಿಗಳ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಬಿನಾನ್ಸ್ ವಕ್ತಾರರು ಹೇಳಿದ್ದಾರೆ. ಬಿನಾನ್ಸ್ ಈಗಾಗಲೇ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಕೆಲ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಬಿನಾನ್ಸ್ನ ಮುಖ್ಯ ಸಂಪರ್ಕಾಧಿಕಾರಿ ಪ್ಯಾಟ್ರಿಕ್ ಹಿಲ್ ಮ್ಯಾನ್, ವೆಚ್ಚ ಕಡಿತದ ಭಾಗವಾಗಿ ಕಂಪನಿಯು ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾ ಮಾಡಿಲ್ಲ ಎಂದಿದ್ದಾರೆ.