ನವದೆಹಲಿ: ಸೌದಿ ಅರೇಬಿಯಾ ತನ್ನ ಕಚ್ಚಾತೈಲ ಉತ್ಪಾದನೆಯ ಪ್ರಮಾಣ ಕಡಿತಗೊಳಿಸಿದ್ದು, ಈ ಕ್ರಮವನ್ನು ವರ್ಷಾಂತ್ಯದವರೆಗೆ ಮುಂದುವರಿಸುವುದಾಗಿ ಹೇಳಿದ ನಂತರ ತೈಲ ಬೆಲೆಗಳು ಮಂಗಳವಾರ ಗಮನಾರ್ಹವಾಗಿ ಏರಿಕೆಯಾಗಿವೆ. ಹಾಗೆಯೇ ಇದೇ ಅವಧಿಗೆ ದಿನಕ್ಕೆ 3,00,000 ಬ್ಯಾರೆಲ್ (ಬಿಪಿಡಿ) ರಫ್ತು ಕಡಿತವನ್ನು ಮುಂದುವರಿಸುವುದಾಗಿ ರಷ್ಯಾ ಕೂಡ ಹೇಳಿದೆ ಎಂದು ಆಯಿಲ್ ಪ್ರೈಸ್ (Oil Price) ವರದಿ ಮಾಡಿದೆ.
ತೈಲ ಮಾರುಕಟ್ಟೆಗಳಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾಗೆ ಸಹಕಾರ ನೀಡುತ್ತಿರುವ ರಷ್ಯಾ, ಕಚ್ಚಾ ತೈಲ ರಫ್ತುಗಳನ್ನು 3,00,000 ಬಿಪಿಡಿಗಳಷ್ಟು ಕಡಿಮೆ ಮಾಡುವ ಸ್ವಯಂಪ್ರೇರಿತ ನಿರ್ಧಾರವನ್ನು 2023 ರ ಅಂತ್ಯದವರೆಗೆ ವಿಸ್ತರಿಸಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ಪೂರೈಕೆ ನಿರ್ಬಂಧಗಳನ್ನು ಡಿಸೆಂಬರ್ 2023 ರವರೆಗೆ ವಿಸ್ತರಿಸಿದ ನಂತರ ಐಸಿಇ ಬ್ರೆಂಟ್ ಕ್ರೂಡ್ ಬೆಲೆಗಳು ಬ್ಯಾರೆಲ್ಗೆ 90 ಡಾಲರ್ಗಿಂತ ಹೆಚ್ಚಾಗಿವೆ.
1 ಮಿಲಿಯನ್ ಬಿಪಿಡಿಯಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದು, ಈ ಕ್ರಮವನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಿದೆ ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ. ಅಂದರೆ ವರ್ಷದ ಉಳಿದ ಅವಧಿಗೆ ಸೌದಿ ಅರೇಬಿಯಾದ ಉದ್ದೇಶಿತ ಕಚ್ಚಾ ತೈಲ ಉತ್ಪಾದನೆಯು 9 ಮಿಲಿಯನ್ ಬಿಪಿಡಿ ಆಗಿರಲಿದೆ. ಆದಾಗ್ಯೂ, ಈ ಉತ್ಪಾದನಾ ಕಡಿತದ ಕ್ರಮವನ್ನು ಮಾಸಿಕವಾಗಿ ಪರಿಶೀಲಿಸಲಾಗುವುದು ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.