ಬೆಂಗಳೂರು : ಭಾರತಕ್ಕೆ ಸೌದಿ ಅರೇಬಿಯಾದಿಂದ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸೌದಿ ಅರೇಬಿಯಾ ಜುಲೈನಲ್ಲಿ ದಿನಕ್ಕೆ 4,84,000 ಬ್ಯಾರೆಲ್ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಿದೆ. ಹಿಂದಿನ ತಿಂಗಳುಗಳಲ್ಲಿ ಈ ಪ್ರಮಾಣ ದಿನಕ್ಕೆ 734,000 ಬ್ಯಾರೆಲ್ (ಬಿಪಿಡಿ) ಆಗಿತ್ತು. ಅಂದರೆ ಸೌದಿ ಅರೇಬಿಯಾದಿಂದ ಬರುತ್ತಿದ್ದ ಕಚ್ಚಾ ತೈಲದ ಪ್ರಮಾಣ ಶೇ 34 ರಷ್ಟು ಕಡಿಮೆಯಾಗಿದೆ. ಜುಲೈನಲ್ಲಿ ದೇಶವು 1 ಮಿಲಿಯನ್ ಬಿಪಿಡಿ ಹೆಚ್ಚುವರಿ ಪೂರೈಕೆ ಕಡಿತವನ್ನು ಘೋಷಿಸಿದ ನಂತರ ಸೌದಿಯಿಂದ ಆಮದುಗಳಲ್ಲಿ ಇಳಿಮುಖವಾಗಿದೆ.
ಮೇ ತಿಂಗಳಲ್ಲಿ ಸೌದಿ ಅರೇಬಿಯಾವು 5,00,000 bpd ಯಷ್ಟು ಕಚ್ಚಾ ತೈಲದ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಹಾಗೆಯೇ ಇರಾಕ್ ವರ್ಷದ ಅಂತ್ಯದವರೆಗೆ 2,00,000 bpd ಗಿಂತ ಹೆಚ್ಚು ಕಡಿತಗೊಳಿಸಿದೆ. ಮೇ ನಿಂದ 2023 ರ ಅಂತ್ಯದವರೆಗೆ ರಷ್ಯಾ 50,000 ಬಿಪಿಡಿ ಯಷ್ಟು ಉತ್ಪಾದನೆಯನ್ನು ಕಡಿಮೆ ಮಾಡಿದೆ. ಒಟ್ಟಾರೆಯಾಗಿ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಸಾಮಾನ್ಯವಾಗಿ ಒಪೆಕ್ + ಎಂದು ಕರೆಯಲ್ಪಡುವ ಅದರ ಮಿತ್ರರಾಷ್ಟ್ರಗಳು 2023 ರ ಮೇ ತಿಂಗಳಲ್ಲಿ 1.6 ಮಿಲಿಯನ್ ಬಿಪಿಡಿ ತೈಲ ಉತ್ಪಾದನೆ ಕಡಿತವನ್ನು ಘೋಷಿಸಿವೆ.
ಏತನ್ಮಧ್ಯೆ ಜುಲೈನಲ್ಲಿ ರಷ್ಯಾ ಭಾರತದ ಅಗ್ರ ಕಚ್ಚಾ ತೈಲ ಪೂರೈಕೆದಾರನಾಗಿ ಮುಂದುವರೆದಿದೆ. ಸದ್ಯ ಸೌದಿ ಅರೇಬಿಯಾ ಮತ್ತು ಇರಾಕ್ನಿಂದ ಪೂರೈಕೆಯಾಗುತ್ತಿರುವ ಒಟ್ಟು ಕಚ್ಚಾ ತೈಲಕ್ಕಿಂತಲೂ ಅಧಿಕ ಪ್ರಮಾಣದ ತೈಲ ರಷ್ಯಾವೊಂದರಿಂದಲೇ ಬರುತ್ತಿದೆ. ಭಾರತವು ಜುಲೈನಲ್ಲಿ ರಷ್ಯಾದಿಂದ 1.9 ಮಿಲಿಯನ್ ಬಿಪಿಡಿ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಇರಾಕ್ 891,000 ಬಿಪಿಡಿ ತೈಲ ಪೂರೈಸಿದೆ.