ನವದೆಹಲಿ: ತೆಲಂಗಾಣದಲ್ಲಿ ಮೊಬೈಲ್ ಗ್ಲಾಸ್ ಕಾರ್ಖಾನೆ ಆರಂಭಿಸಲು ಯೋಜಿಸಿದ್ದ ಅಮೆರಿಕ ಮೂಲದ ಕಾರ್ನಿಂಗ್ ಇಂಕ್ ಈಗ ತನ್ನ ನಿರ್ಧಾರ ಬದಲಾಯಿಸಿದ್ದು, ತೆಲಂಗಾಣದ ಬದಲಿಗೆ ತಮಿಳುನಾಡಲ್ಲಿ ಕಾರ್ಖಾನೆ ಆರಂಭಿಸಲು ನಿರ್ಧರಿಸಿದೆ. ತೆಲಂಗಾಣದಲ್ಲಿ ಸರ್ಕಾರ ಬದಲಾಗಿರುವುದೇ ಕಾರ್ನಿಂಗ್ನ ನಿರ್ಧಾರ ಬದಲಾಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಆ್ಯಪಲ್ ಕಂಪನಿಯ ಪ್ರಮುಖ ಪೂರೈಕೆದಾರನಾದ ಕಾರ್ನಿಂಗ್, ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿ ಆಪ್ಟಿಮಸ್ ಇನ್ಫ್ರಾಕಾಮ್ ಸಹಯೋಗದಲ್ಲಿ ತಮಿಳುನಾಡಲ್ಲಿ 1000 ಕೋಟಿ ರೂ. ಬಂಡವಾಳದಲ್ಲಿ ಕಾರ್ಖಾನೆ ಆರಂಭಿಸಲಿದೆ.
ಈ ಹಿಂದೆ, ಆಗಿನ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರ್ಕಾರವು ಕಾರ್ನಿಂಗ್ ಇಂಕ್ ಗೊರಿಲ್ಲಾ ಗ್ಲಾಸ್ ಉತ್ಪಾದನಾ ಘಟಕ ಸ್ಥಾಪಿಸಲು ತೆಲಂಗಾಣವನ್ನು ಆಯ್ಕೆ ಮಾಡಿದೆ ಎಂದು ಸೆಪ್ಟೆಂಬರ್ನಲ್ಲಿ ಘೋಷಿಸಿತ್ತು. ತೆಲಂಗಾಣದಲ್ಲಿ ಉದ್ದೇಶಿತ ಘಟಕವು 800 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ರಾಜ್ಯದ ಮಾಜಿ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಅವರ ಕಚೇರಿಯ ಹೇಳಿಕೆ ತಿಳಿಸಿತ್ತು.
ಕಾರ್ನಿಂಗ್ ಇಂಕ್ ಈಗ ತಮಿಳುನಾಡಿನ ಶ್ರೀಪೆರಂಬದೂರ್ ಬಳಿಯ ಪಿಳ್ಳೈಪಕ್ಕಂನಲ್ಲಿ 1,000 ಕೋಟಿ ರೂ.ಗಳ ಉತ್ಪಾದನಾ ಘಟಕ ಸ್ಥಾಪಿಸಲು ಯೋಜಿಸುತ್ತಿದೆ ಮತ್ತು 300 ಜನರಿಗೆ ಉದ್ಯೋಗ ನೀಡಲಿದೆ. ವರದಿಯ ಪ್ರಕಾರ ಇತರ ಆ್ಯಪಲ್ ಪೂರೈಕೆದಾರರಾದ ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್ ಕಾರ್ಖಾನೆಗಳು ಹತ್ತಿರವಾಗುವುದರಿಂದ ಕಾರ್ನಿಂಗ್ ತೆಲಂಗಾಣಕ್ಕಿಂತ ತಮಿಳುನಾಡನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ.