ಕರ್ನಾಟಕ

karnataka

ಸೆಪ್ಟೆಂಬರ್​ನಲ್ಲಿ ಪ್ರಮುಖ ಹಣದುಬ್ಬರ ಶೇ 4.5ಕ್ಕೆ ಇಳಿಕೆ; ಹಣಕಾಸು ಸಚಿವಾಲಯ ಹೇಳಿಕೆ

By ETV Bharat Karnataka Team

Published : Nov 5, 2023, 7:36 PM IST

ಭಾರತದ ಪ್ರಮುಖ ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Headline inflation under control due to LPG price cut, vegetable price correction: Govt
Headline inflation under control due to LPG price cut, vegetable price correction: Govt

ನವದೆಹಲಿ :2023-24ರಲ್ಲಿ ಜಿಡಿಪಿ ಬೆಳವಣಿಗೆಯು ಸರಿಯಾದ ಹಾದಿಯಲ್ಲಿದ್ದರೂ, ಕೆಲ ಆಹಾರ ಪದಾರ್ಥಗಳ ಬೆಲೆಗಳ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಹಣದುಬ್ಬರ ಕಡಿಮೆಯಾಗಲು ಸ್ವಲ್ಪ ಸಮಯ ಅಡ್ಡಿಯಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಕೆಲ ಆಹಾರ ಪದಾರ್ಥಗಳಲ್ಲಿ ಕಾಲೋಚಿತ ಮತ್ತು ಹವಾಮಾನ ಆಧರಿತ ಪೂರೈಕೆ ತೊಡಕುಗಳಿಂದ ಹಣದುಬ್ಬರ ಇಳಿಕೆಗೆ ಅಡ್ಡಿಯಾಗಿದ್ದು, ಇದು ತಾತ್ಕಾಲಿಕ ವಿದ್ಯಮಾನವಾಗಿದೆ ಎಂದು ಅದು ತಿಳಿಸಿದೆ.

ಹಣಕಾಸು ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ, ತರಕಾರಿ ಬೆಲೆಗಳಲ್ಲಿನ ಇಳಿಕೆ ಮತ್ತು ಎಲ್ಪಿಜಿ ಬೆಲೆಗಳಲ್ಲಿ ಇತ್ತೀಚಿನ ಕಡಿತದ ಹಿನ್ನೆಲೆಯಲ್ಲಿ ಹಣದುಬ್ಬರವು ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ. "ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಶೇಕಡಾ 5 ರಷ್ಟಿತ್ತು. ಇದು ಹಣದುಬ್ಬರ ಗುರಿಯ ಮೇಲಿನ ಸಹಿಷ್ಣುತೆಯ ಮಿತಿಯೊಳಗೆ ಇತ್ತು. ಜುಲೈ-ಆಗಸ್ಟ್​ನಲ್ಲಿನ ಹಣದುಬ್ಬರ ಹೆಚ್ಚಳವು ತಾತ್ಕಾಲಿಕವಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ" ಎಂದು ವರದಿ ತಿಳಿಸಿದೆ.

ಸಿಪಿಐ ಪಟ್ಟಿಯಲ್ಲಿರುವ 299 ವಸ್ತುಗಳ ಪೈಕಿ, ಜುಲೈನಲ್ಲಿ ಎರಡಂಕಿ ಹಣದುಬ್ಬರವನ್ನು ಹೊಂದಿರುವ ಆಹಾರ ಪದಾರ್ಥಗಳಲ್ಲಿ ಕೇವಲ 11.4 ಪ್ರತಿಶತದಷ್ಟು ಸರಕುಗಳು ಮಾತ್ರ ಮುಖ್ಯ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ. ಆದಾಗ್ಯೂ, ಇದು ಸೆಪ್ಟೆಂಬರ್​ನಲ್ಲಿ ಗಮನಾರ್ಹವಾಗಿ ಶೇಕಡಾ 7 ಕ್ಕೆ ಇಳಿದಿದೆ. ಆಹಾರ ಹಣದುಬ್ಬರ ಕಡಿಮೆಯಾಗುವುದರ ಜೊತೆಗೆ ಸೆಪ್ಟೆಂಬರ್​ನಲ್ಲಿ ಇಂಧನ ಮತ್ತು ಲಘು ಸರಕುಗಳ ಹಣದುಬ್ಬರವೂ ಕಡಿಮೆಯಾಗಿದೆ. ದೇಶೀಯ ಎಲ್​ಪಿಜಿ ಬೆಲೆಯನ್ನು ಸಿಲಿಂಡರ್​ಗೆ 200 ರೂ.ಗಳಷ್ಟು ಕಡಿತಗೊಳಿಸಿದ ಪರಿಣಾಮವಾಗಿ ಎಲ್​ಪಿಜಿ ಹಣದುಬ್ಬರವು ಆಗಸ್ಟ್​ನಲ್ಲಿ ಶೇಕಡಾ 4.2 ಇದ್ದದ್ದು ಸೆಪ್ಟೆಂಬರ್​ನಲ್ಲಿ ಮೈನಸ್​ 12.7 ಶೇಕಡಾಕ್ಕೆ ಇಳಿದಿದೆ.

ಪ್ರಮುಖ (ಆಹಾರೇತರ, ಇಂಧನೇತರ) ಹಣದುಬ್ಬರವು ಆಗಸ್ಟ್​ನಲ್ಲಿ ಶೇಕಡಾ 4.9 ಇದ್ದದ್ದು ಸೆಪ್ಟೆಂಬರ್​ನಲ್ಲಿ ಶೇಕಡಾ 4.5 ಕ್ಕೆ ಇಳಿದಿದೆ. ಇದು ಕಳೆದ 42 ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಮುಖ ಹಣದುಬ್ಬರವಾಗಿದೆ. ಇದಲ್ಲದೆ, ಆಗಸ್ಟ್ ಸತತ ಏಳನೇ ತಿಂಗಳು ಪ್ರಮುಖ ಹಣದುಬ್ಬರವು ಆರ್​ಬಿಐನ ಗರಿಷ್ಠ ಸಹಿಷ್ಣುತೆಯ ಬ್ಯಾಂಡ್​ನಲ್ಲಿ ಅಂದರೆ ಶೇಕಡಾ 6 ರಷ್ಟಿದೆ. ಇದರ ಪರಿಣಾಮವಾಗಿ ಮುಖ್ಯ ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡಾ 5.5 ಕ್ಕೆ ಇಳಿದಿದೆ. ಇದು 2022-23 ರ ಮೊದಲಾರ್ಧದಲ್ಲಿ ಶೇಕಡಾ 7.2 ಮತ್ತು 2022-23 ರ ದ್ವಿತೀಯಾರ್ಧದಲ್ಲಿ ಶೇಕಡಾ 6.2 ರಷ್ಟಿತ್ತು.

ಇದನ್ನೂ ಓದಿ : ಭಾರತದ ವಿದ್ಯುತ್ ಬಳಕೆ ಶೇ 9.4ರಷ್ಟು ಏರಿಕೆ; 984 ಶತಕೋಟಿ ಯುನಿಟ್​ಗೆ ಬೇಡಿಕೆ

ABOUT THE AUTHOR

...view details