ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಊಹೆಗೆ ನಿಲುಕದ್ದು. ಇದು ಸಾಮಾನ್ಯ ಕೂಡಾ. ಕೆಲವು ಸಂದರ್ಭಗಳಲ್ಲಿ ಗೊತ್ತಿಲ್ಲದೇ ಹಲವು ಅಪಾಯಗಳಿಗೆ ನಾವು ಒಳಗಾಗುತ್ತೇವೆ. ಆಕಸ್ಮಿಕವಾಗಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವ ಪ್ರಸಂಗಗಳೂ ಬರುತ್ತವೆ. ಅಂಥ ಸಂದರ್ಭದಲ್ಲಿ ಹಣಕಾಸಿನ ಕೊರತೆ ಕಾಡಬಹುದು. ಇಂಥ ಎಲ್ಲ ತುರ್ತು ಪರಿಸ್ಥಿತಿಗಳಿಗೆ ಮುಂಚಿತವಾಗಿ ಸಿದ್ಧರಾಗಿರಬೇಕು. ಅದಕ್ಕಾಗಿ ಸ್ವಲ್ಪ ಹಣವನ್ನೂ ಯಾವಾಗಲೂ ಸಿದ್ಧವಾಗಿಟ್ಟುಕೊಳ್ಳಬೇಕು. ಆಕಸ್ಮಿಕ ತುರ್ತು ನಿಧಿ ಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿಯುತ್ತದೆ.
ತುರ್ತು ಪರಿಸ್ಥಿತಿ ಬಂದ ಬಳಿಕ ಅದು ದೊಡ್ಡ ಪರಿಣಾಮ ಉಂಟು ಮಾಡಬಲ್ಲದು. ಮುಂಚಿತವಾಗಿ ಸಿದ್ಧರಾಗದಿದ್ದರೆ ನಮ್ಮ ಉಳಿತಾಯ ಮತ್ತು ಹೂಡಿಕೆಗಳು ಖಾಲಿಯಾಗುತ್ತವೆ. ಕೆಲವೊಮ್ಮೆ ಆದಾಯ ಮತ್ತು ಅಸಲು ನಷ್ಟದ ಅಪಾಯವನ್ನೂ ಒಳಗೊಂಡಿರುತ್ತದೆ. ನಮ್ಮ ಪ್ರಮುಖ ಆರ್ಥಿಕ ಗುರಿಗಳಿಗೂ ಅಡ್ಡಿಯಾಗಬಹುದು. ಉಳಿತಾಯ ಹಣಕಾಸು ಯೋಜನೆಯು ಸಾಕಷ್ಟು ಆಕಸ್ಮಿಕ ತುರ್ತು ನಿಧಿ ಒಳಗೊಂಡಿರುತ್ತದೆ. ಅದರ ಸಮರ್ಥ ನಿರ್ವಹಣೆಗಾಗಿ ಮುನ್ನೆಚ್ಚರಿಕೆ ಅನುಸರಿಸಬೇಕು.
6 ತಿಂಗಳಿನ ಮೊತ್ತ ಹೊಂದಿಸಿ: ಆಕಸ್ಮಿಕ ತುರ್ತು ನಿಧಿಯು ಕನಿಷ್ಠ 6 ತಿಂಗಳ ಮನೆಯ ವೆಚ್ಚಗಳು ಮತ್ತು ಸಾಲದ ಕಂತುಗಳಿಗೆ ಆಗುವಷ್ಟು ಮೊತ್ತ ಹೊಂದಿಸಿರಬೇಕು. ಯಾವುದೇ ಆದಾಯವಿಲ್ಲದ ಈ ಅವಧಿಯಲ್ಲಿ ಇದು ಸಾಕಾಗುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ, 12 ತಿಂಗಳವರೆಗೆ ನಿಮ್ಮ ಒಟ್ಟಾರೆ ವೆಚ್ಚ ಪೂರೈಸಲು ತುರ್ತು ನಿಧಿ ಠೇವಣಿ ಹೆಚ್ಚಿಸಬೇಕು. ಅಗತ್ಯ ವಸ್ತುಗಳು, ಮನೆ ಬಾಡಿಗೆ, ಮಕ್ಕಳ ಶುಲ್ಕ, ಇಎಂಐಗಳು, ವಾಹನ ವೆಚ್ಚಗಳು ಹಾಗು ಇತರ ಬಿಲ್‌ಗಳು ಇತ್ಯಾದಿಗಳಿಗೆ ನಿಮಗೆ ಎಷ್ಟು ಬೇಕಾಗುತ್ತದೆ ಎಂಬುದನ್ನು ಆಧರಿಸಿ ಲೆಕ್ಕ ಹಾಕಿಕೊಳ್ಳಿ.
ಕಾಲಕಾಲಕ್ಕೆ ನಿಮ್ಮ ಆಕಸ್ಮಿಕ ತುರ್ತು ನಿಧಿಯನ್ನು ಪರಿಶೀಲಿಸಿ. ಬದಲಾಗುತ್ತಿರುವ ಜೀವನಶೈಲಿ ಮತ್ತು ವೆಚ್ಚಗಳನ್ನು ಸರಿಹೊಂದಿಸಲು ಯೋಜನೆ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚಗಳಲ್ಲಿ ಏರಿಕೆಯಾಗುತ್ತಿದೆ. ಯಾವ ಹೆಚ್ಚುವರಿ ವೈಯಕ್ತಿಕ ವೆಚ್ಚಗಳು ಇದ್ದಕ್ಕಿದ್ದಂತೆ ಉದ್ಭವಿಸುತ್ತವೆ ಎಂಬುದು ನಮಗೆ ತಿಳಿಯದು.