ನವದೆಹಲಿ:ತೆರಿಗೆ ವಂಚನೆಯನ್ನು ತಡೆಯಲು ವಿಶಿಷ್ಟ ಗುರುತಿನ ನಂಬರ್(ಆಧಾರ್) ಮತ್ತು ಪ್ಯಾನ್ ನಂಬರ್ ಸಂಯೋಜಿಸುವ ಕಾಲ ಮಿತಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಇದೇ 31 ಕ್ಕೆ ಕೊನೆಯಿದ್ದ ದಿನವನ್ನು ಜೂನ್ 30 ರವರೆಗೂ ನೀಡಿದೆ. ಇದರಿಂದ ಜನರು ನಿರಾಳವಾಗಿ ಪ್ಯಾನ್ - ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳಬಹುದು. ಹಾಗೊಂದು ವೇಳೆ ಪ್ಯಾನ್ ಮತ್ತು ಆಧಾರ್ ನಂಬರ್ ಲಿಂಕ್ ಆಗದಿದ್ದರೆ, ಅದರ ಪರಿಣಾಮಗಳು ಏನಾಗಬಹುದು. ಹಣಕಾಸಿನ ವ್ಯವಹಾರಕ್ಕೆ ಏನಾದರೂ ಸಮಸ್ಯೆಗಳು ಉಂಟಾಗಲಿವೆಯಾ ಎಂಬುದನ್ನು ಸರ್ಕಾರ ಇದೇ ವೇಳೆ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೊರಡಿಸಿದ ಸುತ್ತೋಲೆಯ ಪ್ರಕಾರ, ಎಲ್ಲಾ ಜನರು ಜೂನ್ 31, 2023 ರೊಳಗೆ ಆಧಾರ್ ಮತ್ತು ಪ್ಯಾನ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ಅವರು ಐಟಿ ಕಾಯ್ದೆಯ ಅಡಿಯಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
1. ಪ್ಯಾನ್ ನಿಷ್ಕ್ರಿಯ: ಆದಾಯ ತೆರಿಗೆ ಇಲಾಖೆಯ ಪ್ರಕಾರ, ಗಡುವಿನ ಒಳಗೆ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಸಂಖ್ಯೆ ತನ್ನಿಂತಾನೇ ನಿಷ್ಕ್ರಿಯವಾಗುತ್ತದೆ. ಆದಾಯ ತೆರಿಗೆ ನಿಯಮ 114 AAA ಅನ್ವಯದಂತೆ ಪ್ಯಾನ್ ನಿಷ್ಕ್ರಿಯವಾದರೆ ಅದು ಎಲ್ಲಿಯೂ ಬಳಕೆಗೆ ಬರುವುದಿಲ್ಲ.
2. ದಂಡದ ಹೊರೆ:ನಿಗದಿತ ಗಡುವಿನೊಳಗೆ ಪ್ಯಾನ್- ಆಧಾರ್ ಲಿಂಕ್ ಮಾಡಿದಲ್ಲಿ ವಿಳಂಬ ಶುಲ್ಕವಾದ 1 ಸಾವಿರ ರೂ. ಮಾತ್ರ ಪಾವತಿಸಬೇಕು. ಇಲ್ಲವಾದಲ್ಲಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಯವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ. ಯಾವುದೇ ತೆರಿಗೆ ಮರುಪಾವತಿಯೂ ಆಗುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ.
3. ಆದಾಯ ತೆರಿಗೆ ರಿಟರ್ನ್‌ಗೆ ಕೊಕ್ಕೆ: ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಸಹ ಸವಾಲಾಗಬಹುದು. ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ತಡೆ ಮತ್ತು ತಿರಸ್ಕರಿಸಬಹುದು. ತೆರಿಗೆ ಮರುಪಾವತಿಯನ್ನು ಪಡೆಯುವುದಕ್ಕೆ ತಡೆ ಬೀಳುವ ಸಂಭವವಿರುತ್ತದೆ.