ನವದೆಹಲಿ: ತೈಲ ಕಂಪನಿಗಳು (ಒಎಂಸಿ) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 7 ರೂ. ಹೆಚ್ಚಿಸಿವೆ. ಈಗ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ನ ಚಿಲ್ಲರೆ ಬೆಲೆ ಅಂದರೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಪ್ರತಿ ಸಿಲಿಂಡರ್‌ಗೆ 1,773 ರೂ.ನಿಂದ 1,780 ರೂ.ಗೆ ಏರಿಕೆಯಾಗಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,733.50 ರಿಂದ 1,740.50 ಕ್ಕೆ, ಚೆನ್ನೈನಲ್ಲಿ 1,945 ರಿಂದ 1,952 ಕ್ಕೆ ಮತ್ತು ಕೋಲ್ಕತ್ತಾದಲ್ಲಿ 1,895 ರಿಂದ 1,902 ಕ್ಕೆ ಏರಿಕೆಯಾಗಲಿದೆ.
ಈ ವರ್ಷದ ಮೇ ಮತ್ತು ಜೂನ್ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಸತತ ಎರಡು ಬಾರಿ ಕಡಿಮೆ ಮಾಡಲಾಗಿತ್ತು. ಮೇ ತಿಂಗಳಲ್ಲಿ ಒಎಂಸಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 172 ರೂ.ಗಳಷ್ಟು ಕಡಿಮೆ ಮಾಡಿದ್ದರೆ, ಜೂನ್ನಲ್ಲಿ 83 ರೂ. ಇಳಿಸಿದ್ದವು. ಜೂನ್ 1 ರಂದು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1,773 ರೂ ಆಗಿತ್ತು. ತೈಲ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸುತ್ತವೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ತೈಲ ಕಂಪನಿಗಳು ಈ ವರ್ಷದ ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 350.50 ರೂ ಮತ್ತು ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 50 ರೂ.ಗಳಷ್ಟು ಹೆಚ್ಚಿಸಿದ್ದವು. ಕಳೆದ ವರ್ಷ ಸೆಪ್ಟೆಂಬರ್ 1ರಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ 91.50 ರೂಪಾಯಿ ಕಡಿಮೆ ಮಾಡಲಾಗಿತ್ತು.