ಬೆಂಗಳೂರು:ಸುಮಾರು ಐದು ಸಾವಿರ ವಸತಿ ರಹಿತ ಪೌರ ಕಾರ್ಮಿಕರಿಗೆ 300 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿರುವ 'ಪೌರ ಆಸರೆ' ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಜೊತೆಗೆ ಎಸ್ಸಿ, ಎಸ್ಟಿ ಮನೆ ನಿರ್ಮಾಣದ ಅನುದಾನ ಹೆಚ್ಚಳ ಮಾಡಲಾಗಿದೆ. 1.75 ಲಕ್ಷದಿಂದ 2 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಸಚಿವ ಎಂಟಿಬಿ ನಾಗರಾಜು ಹರ್ಷ:ಈ ವಸತಿ ಯೋಜನೆ ಪ್ರಸ್ತಾಪಿಸಿರುವುದಕ್ಕೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
2023-24ನೇ ಸಾಲಿನ ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ''ಕೆಎಸ್ಎಸ್ಐಡಿಸಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕೋಡ್ಕಣಿ, ಬೆಳಗಾವಿಯ ಕಣಗಲಾ, ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ.ಗಳಷ್ಟು ಸಾಲ ನೀಡುವ ಪ್ರಸ್ತಾಪದೊಂದಿಗೆ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತಾದೆ'' ಎಂದು ತಿಳಿಸಿದ್ದಾರೆ.
ಆಹಾರ ಧಾನ್ಯಗಳನ್ನು ಖರೀದಿಸಲು 3,500 ಕೋಟಿ ರೂ.: ''ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು 3,500 ಕೋಟಿ ರೂ.ಗಳನ್ನು ಆವರ್ತ ನಿಧಿಗೆ ಒದಗಿಸಿ ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಗಾತ್ರದ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿ ಸ್ಥಾಪಿಸಿದ ಕೀರ್ತಿಗೆ ಬೊಮ್ಮಾಯಿ ಅವರಿಗೆ ಸಲ್ಲಲಿದೆ'' ಎಂದು ಹೇಳಿದರು.