ಮುಂಬೈ :ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಹಣಕಾಸು ಸೇವೆಗಳ ಷೇರುಗಳ ಇಳಿಕೆಯ ಮಧ್ಯೆ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ವೇಗ ಕಳೆದುಕೊಂಡವು. ಬಿಎಸ್ಇ ಸೆನ್ಸೆಕ್ಸ್ 325.58 ಪಾಯಿಂಟ್ಸ್ ಕುಸಿದು 64,933.87 ರಲ್ಲಿ ಕೊನೆಯಾದರೆ, ಎನ್ಎಸ್ಇ ನಿಫ್ಟಿ-50 82 ಪಾಯಿಂಟ್ಸ್ ಕುಸಿದು 19,443.55 ರಲ್ಲಿ ಕೊನೆಗೊಂಡಿದೆ. ನಿನ್ನೆಯ ಮುಹೂರ್ತ ವ್ಯಾಪಾರ ವಹಿವಾಟಿನಲ್ಲಿ ಅತ್ಯಧಿಕ ಲಾಭ ಗಳಿಸಿದ ನಂತರ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ತೀವ್ರ ಕುಸಿತ ಕಂಡವು.
ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ನಿಫ್ಟಿ ಐಟಿಯಂತಹ ಹೆವಿವೇಯ್ಟ್ ಗಮನಾರ್ಹ ಕುಸಿತದೊಂದಿಗೆ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಪಿಎಸ್ಯು ಬ್ಯಾಂಕ್ ಮಾತ್ರ ವಲಯ ಸೂಚ್ಯಂಕಗಳಲ್ಲಿ ಲಾಭ ಗಳಿಸಿದವು. ನಿಫ್ಟಿ-50 ಯಲ್ಲಿ ಕೋಲ್ ಇಂಡಿಯಾ, ಐಷರ್ ಮೋಟಾರ್ಸ್, ಹಿಂಡಾಲ್ಕೊ, ಎಂ & ಎಂ ಮತ್ತು ಬಿಪಿಸಿಎಲ್ ಲಾಭ ಗಳಿಸಿದ ಪ್ರಮುಖ ಐದು ಷೇರುಗಳಾಗಿವೆ. ಮತ್ತೊಂದೆಡೆ ಎಸ್ಬಿಐ ಲೈಫ್, ಬಜಾಜ್ ಫೈನಾನ್ಸ್, ಗ್ರಾಸಿಮ್, ಇನ್ಫೋಸಿಸ್ ಮತ್ತು ನೆಸ್ಲೆ ನಷ್ಟ ಅನುಭವಿಸಿದವು.
ಕೋಲ್ ಇಂಡಿಯಾ ಷೇರುಗಳು ಇಂದು ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆಯಾಗಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಇನ್ಫೋಸಿಸ್ ಹೊರತುಪಡಿಸಿ, ಟೆಕ್ ಮಹೀಂದ್ರಾ ಮತ್ತು ಟಿಸಿಎಸ್ ಸೇರಿದಂತೆ ಹಲವಾರು ಐಟಿ ಷೇರುಗಳು ವಹಿವಾಟಿನಲ್ಲಿ ಕುಸಿದವು. ಎಚ್ಡಿಎಫ್ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಂಥ ಹೆವಿವೇಯ್ಟ್ ಷೇರುಗಳು ಸಹ ಇಳಿಕೆಯಲ್ಲಿ ವಹಿವಾಟು ಅಂತ್ಯಗೊಳಿಸಿವೆ.