ಬೆಂಗಳೂರು :ವಿದೇಶಿ ನಿಧಿಯ ಹೊರಹರಿವು ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಅಕ್ಟೋಬರ್ 31 ರಂದು ಎರಡು ದಿನಗಳ ಏರಿಕೆಯ ನಂತರ ಮಂಗಳವಾರ ಇಳಿಕೆಯೊಂದಿಗೆ ಕೊನೆಗೊಂಡವು. ಯುಎಸ್ ಫೆಡರಲ್ ರಿಸರ್ವ್ನ ಬಡ್ಡಿದರ ನಿರ್ಧಾರ ಹೊರಬೀಳುವ ಮುನ್ನ ಹೂಡಿಕೆದಾರರು ಹಿಂತೆಗೆದಿರುವುದು ಕೂಡ ಇಂದಿನ ಇಳಿಕೆಗೆ ಕಾರಣವಾಗಿದೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 237.72 ಪಾಯಿಂಟ್ಸ್ ಅಥವಾ ಶೇಕಡಾ 0.37 ರಷ್ಟು ಕುಸಿದು 63,874.93 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಂದು ಹಂತದಲ್ಲಿ 300.12 ಪಾಯಿಂಟ್ ಅಥವಾ ಶೇಕಡಾ 0.46 ರಷ್ಟು ಕುಸಿದು 63,812.53 ಕ್ಕೆ ತಲುಪಿತ್ತು. ನಿಫ್ಟಿ 61.30 ಪಾಯಿಂಟ್ ಅಥವಾ ಶೇಕಡಾ 0.32 ರಷ್ಟು ಕುಸಿದು 19,079.60 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಷೇರುಗಳ ಪೈಕಿ ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಎನ್ಟಿಪಿಸಿ, ನೆಸ್ಲೆ ಮತ್ತು ಪವರ್ ಗ್ರಿಡ್ ಲಾಭ ಗಳಿಸಿದವು.