ನವದೆಹಲಿ: ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಬುಧವಾರ ಹೂಡಿಕೆದಾರರು ವಿಮಾನ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳ ಖರೀದಿಗೆ ಆಸಕ್ತಿ ತೋರಿಸಿದ್ದು ಕಂಡು ಬಂದಿತು.
ಚಂದ್ರಯಾನ -3 ರ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ 'ಸಾಫ್ಟ್ ಲ್ಯಾಂಡಿಂಗ್' ಮಾಡುವಲ್ಲಿ ಯಶಸ್ವಿಯಾಗಿದೆ. ಇಂಥ ಸಾಧನೆ ಮಾಡಿದ ಮೊದಲ ದೇಶ ಭಾರತವಾಗಿದೆ. ಹೀಗಾಗಿ ಬುಧವಾರ ಚಂದ್ರಯಾನ ಮಿಷನ್ ಬಗ್ಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು, ವಿಮಾನ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಬಗ್ಗೆ ಹೂಡಿಕೆದಾರರು ಒಲವು ಹೊಂದಿರುವುದು ಕಂಡು ಬಂದಿತು. ಚಂದ್ರಯಾನ -3 ಅಭಿಯಾನಕ್ಕೆ 200 ಕ್ಕೂ ಹೆಚ್ಚು ಬಿಡಿ ಭಾಗಗಳನ್ನು ಪೂರೈಸಿದ ಸೆಂಟಮ್ ಎಲೆಕ್ಟ್ರಾನಿಕ್ಸ್ ಕಂಪನಿಯೂ ಇದರಲ್ಲಿ ಸೇರಿದೆ.
ಬಿಎಸ್ಇಯಲ್ಲಿ ಸೆಂಟಮ್ ಎಲೆಕ್ಟ್ರಾನಿಕ್ಸ್ ಶೇಕಡಾ 14.91 ರಷ್ಟು ಏರಿಕೆ ಕಂಡರೆ, ಪಾರಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್ ಶೇಕಡಾ 5.47 ರಷ್ಟು ಏರಿಕೆಯಾಗಿವೆ. ಹಾಗೆಯೇ ಎಂಟಿಎಆರ್ ಟೆಕ್ನಾಲಜೀಸ್ ಷೇರುಗಳು ಶೇಕಡಾ 4.84 ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಶೇಕಡಾ 3.57 ರಷ್ಟು ಏರಿಕೆಯಾಗಿದೆ. ರಕ್ಷಣಾ ಸಂಸ್ಥೆ ಭಾರತ್ ಫೋರ್ಜ್ ಶೇ 2.82, ಅಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಶೇ 1.72 ಮತ್ತು ಲಾರ್ಸನ್ ಆಂಡ್ ಟೂಬ್ರೊ ಶೇ 1.42ರಷ್ಟು ಏರಿಕೆ ಕಂಡಿವೆ. ವಿಶೇಷವೆಂದರೆ ಈ ಬಹುತೇಕ ಕಂಪನಿಗಳ ಷೇರುಗಳು ವಹಿವಾಟಿನ ಸಮಯದಲ್ಲಿ ಕಳೆದ ಒಂದು ವರ್ಷದ ಗರಿಷ್ಠ ಮಟ್ಟವನ್ನು ತಲುಪಿವೆ.
ಇಂದು ಅಂದರೆ ಗುರುವಾರದ ವಹಿವಾಟಿನಲ್ಲಿಯೂ ವಿಮಾನ ಮತ್ತು ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಷೇರುಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಗುರುವಾರ, ಲಾರ್ಸೆನ್ & ಟೂಬ್ರೊ (ಎಲ್ & ಟಿ) ಶೇಕಡಾ 1 ರಷ್ಟು ಏರಿಕೆಯಾಗಿ 2,750 ರೂ.ಗೆ ತಲುಪಿದೆ. ಲಾರ್ಸೆನ್ & ಟೂಬ್ರೊ ಉಡಾವಣಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಟ್ರ್ಯಾಕಿಂಗ್ ರಾಡಾರ್ ಸೇರಿದಂತೆ ಭಾರತದ ಚಂದ್ರಯಾನಕ್ಕೆ ಕಂಪನಿಯು ಉಪಕರಣಗಳನ್ನು ಪೂರೈಸಿದೆ.