ನವದೆಹಲಿ: ರಫ್ತು ನಿರ್ಬಂಧಗಳ ಮಧ್ಯೆ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 2,410 ರೂ. ದರದಲ್ಲಿ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು (ಮಂಗಳವಾರ) ಹೇಳಿದ್ದಾರೆ. "ಎನ್ಸಿಸಿಎಫ್ ಮತ್ತು ನಾಫೆಡ್ ಸೋಮವಾರ ದೇಶಾದ್ಯಂತ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭಿಸಿದ್ದವು. ಇಂದು ಮತ್ತಷ್ಟು ಉತ್ತೇಜನಕಾರಿ ಕ್ರಮಗಳನ್ನು ಘೋಷಿಸುತ್ತಿದ್ದೇವೆ. ಗ್ರಾಹಕರು ಮತ್ತು ರೈತರು ಇಬ್ಬರೂ ನಮಗೆ ಅಮೂಲ್ಯ. ರೈತರು ಯಾವುದೇ ಚಿಂತೆ ಮಾಡದೆ ತಾವು ಬೆಳೆದ ಈರುಳ್ಳಿಯನ್ನು ಉತ್ತಮ ಬೆಲೆಗೆ ಸರ್ಕಾರಕ್ಕೆ ಮಾರಾಟ ಮಾಡಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ರೈತರು ಚಿಂತಿಸಬೇಕಾಗಿಲ್ಲ. ಆತಂಕದಿಂದ ಈರುಳ್ಳಿ ಮಾರುವುದು ಅಗತ್ಯವಿಲ್ಲ. ನಾನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇನೆ. ಅಜಿತ್ ಪವಾರ್ ಮತ್ತು ನಾನು ಹಲವಾರು ಬಾರಿ ಮಾತನಾಡಿದ್ದೇವೆ. ಮಹಾರಾಷ್ಟ್ರ ಕೃಷಿ ಸಚಿವರು ಮತ್ತು ಇತರ ಹಲವಾರು ರಾಜ್ಯ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇನೆ" ಎಂದು ಕೇಂದ್ರ ವಾಣಿಜ್ಯ ಸಚಿವರು ತಿಳಿಸಿದರು.
ಈರುಳ್ಳಿ ಕೆ.ಜಿ ₹40: ಬೆಲೆಗಳನ್ನು ಸ್ಥಿರವಾಗಿಡಲು ಕೇಂದ್ರವು ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. "ಈರುಳ್ಳಿ ಬೆಲೆ ಏರಿಕೆಯಾಗಿರುವ ಪ್ರದೇಶಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುತ್ತೇವೆ" ಎಂದು ಗೋಯಲ್ ಹೇಳಿದರು. ಸದ್ಯ ಈರುಳ್ಳಿ ಬೆಲೆ ಕೆ.ಜಿ.ಗೆ 30 ರೂ.ಗಳಿಂದ 40 ರೂ.ಗೆ ಏರಿದೆ.