ನವದೆಹಲಿ:ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂಬ ವದಂತಿಯ ಮಧ್ಯೆ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿನ ದರಗಳ ಅಂಕಿಅಂಶವನ್ನು ಕೇಂದ್ರ ಸರ್ಕಾರ ಸೋಮವಾರ ನೀಡಿದೆ. ದೆಹಲಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 78 ರೂಪಾಯಿ ಇದ್ದು, ಅತ್ಯಧಿಕವಾಗಿದ್ದರೆ, ದೇಶದ ವಿವಿಧೆಡೆ 50.35 ಪೈಸೆಯಷ್ಟು ಬಿಕರಿಯಾಗುತ್ತಿದೆ ಎಂದು ತಿಳಿಸಿದೆ.
ದೆಹಲಿಯಲ್ಲಿ ಸೋಮವಾರ ಈರುಳ್ಳಿ ಬೆಲೆ ಗರಿಷ್ಠ ಮಟ್ಟದಲ್ಲಿಯೇ ಇತ್ತು. ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸರಾಸರಿ 78 ರೂ. ಮಾರಾಟವಾಗಿದೆ. ದೇಶದಲ್ಲಿ ಸರಾಸರಿ ಬೆಲೆ ಕೆಜಿಗೆ 50.35 ರೂ.ಗಳಷ್ಟಿದ್ದರೆ, ಗರಿಷ್ಠ ದರ ಕೆಜಿಗೆ 83 ರೂ. ಇದೆ. ಅಂದಾಜು ಬೆಲೆ ಕೆಜಿಗೆ 60 ರೂ. ಇದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.
ದೇಶದ ಹಲವೆಡೆ ಈರುಳ್ಳಿಗೆ ಕನಿಷ್ಠ ದರ ಕೆಜಿಗೆ 17 ರೂ. ಇದೆ. ಇ-ಕಾಮರ್ಸ್ ಪೋರ್ಟಲ್‌ಗಳಾದ ಬಿಗ್‌ಬಾಸ್ಕೆಟ್ ಮತ್ತು ಒಟಿಪಿಯಲ್ಲಿ ಕೆಜಿಗೆ 75 ರೂಪಾಯಿ ಮಾರಾಟಕ್ಕಿದೆ. ಸ್ಥಳೀಯ ಮಾರಾಟಗಾರರು ಈರುಳ್ಳಿಯನ್ನು ಕೆಜಿಗೆ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಿದೆ ಅಂಕಿಅಂಶ.
ಈರುಳ್ಳಿ ರಫ್ತು ದರ ಹೆಚ್ಚಳ:ದೇಶೀಯ ಮಾರುಕಟ್ಟೆಯಲ್ಲಿ ತರಕಾರಿ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಶನಿವಾರದಿಂದ ಅನ್ವಯವಾಗುವಂತೆ ವಿದೇಶಗಳಿಗೆ ರಫ್ತಾಗುವ ಪ್ರತಿ ಟನ್ ಈರುಳ್ಳಿಯ ಮೇಲೆ 800 ಅಮೆರಿಕನ್ ಡಾಲರ್ (66 ಸಾವಿರ ರೂಪಾಯಿ) ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ವಿಧಿಸಿದೆ. ಇದು ಈ ವರ್ಷದ ಡಿಸೆಂಬರ್ 31 ರವರೆಗೆ ಜಾರಿ ಇರಲಿದೆ.
ಅಂದರೆ, ಎಂಇಪಿ ಹೆಚ್ಚಳದಿಂದಾಗಿ ಪ್ರತಿ ಕೆಜಿ ಈರುಳ್ಳಿಗೆ 67 ರೂಪಾಯಿ ಬೀಳಲಿದೆ. ಬೆಂಗಳೂರಿನ ರೋಸ್ ಮತ್ತು ಕೃಷ್ಣಾಪುರದ ಈರುಳ್ಳಿ ಹೊರತುಪಡಿಸಿ ಎಲ್ಲಾ ಬಗೆಯ ಈರುಳ್ಳಿಗಳಿಗೆ ಈ ಎಂಇಪಿ ಅನ್ವಯವಾಗಲಿದೆ. ಅದು ಕತ್ತರಿಸಿದ, ಹೋಳುಗಳು ಅಥವಾ ಪುಡಿ ಮಾಡಿದ ಈರುಳ್ಳಿಯೂ MEP ಅಡಿಯಲ್ಲಿ ಬರುತ್ತದೆ. ದೇಶದಲ್ಲಿ ಈರುಳ್ಳಿ ಕೊರತೆ ಕಾಣಿಸದಿರಲು ಕೇಂದ್ರ ಸರ್ಕಾರ ಈಗಾಗಲೇ 5 ಲಕ್ಷ ಟನ್ ಸಂಗ್ರಹಿಸಿದೆ. ಹೆಚ್ಚುವರಿಯಾಗಿ 2 ಲಕ್ಷ ಟನ್ ಆನಿಯನ್ ಅನ್ನು ಈ ವರ್ಷ ಸಂಗ್ರಹಿಸುವುದಾಗಿ ಘೋಷಿಸಿದೆ.
ನಫೆಡ್ನಿಂದ 25 ರೂ.ಗೆ ಮಾರಾಟ:ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ದೇಶದೆಲ್ಲೆಡೆ ಈರುಳ್ಳಿ ಉತ್ಪಾದನೆ ಕುಸಿದಿದೆ. ಎಂಇಪಿ ಹೆಚ್ಚಳದ ಮೂಲಕ ರಫ್ತು ತಡೆಯಬಹುದು. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಈರುಳ್ಳಿ ಲಭ್ಯತೆ ಇರಲಿದೆ. ಇದು ಬೆಲೆ ಏರಿಕೆಯನ್ನು ತಡೆಯುವುದರ ಮೂಲಕ ಜನರಿಗೆ ಸಲೀಸಾಗಿ ಮತ್ತು ಕಡಿಮೆ ದರದಲ್ಲಿ ಸಿಗಲು ಸಹಾಯ ಮಾಡಲಿದೆ ಎಂದು ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರದ ಉಗ್ರಾಣಗಳಲ್ಲಿ ಶೇಖರಿಸಿಡಲಾದ ಈರುಳ್ಳಿಯನ್ನು ದೇಶಾದ್ಯಂತ ಇರುವ ಪ್ರಮುಖ ಕೇಂದ್ರಗಳಿಗೆ ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ವಿಲೇವಾರಿ ಮಾಡಲಾಗುತ್ತಿದೆ. ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (NAFED)ನಿಂದ ನಿರ್ವಹಿಸಲ್ಪಡುವ ಮೊಬೈಲ್ ವ್ಯಾನ್‌ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಕೆಜಿಗೆ 25 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಉಗ್ರಾಣಗಳಿಂದ ಸತತ ವಿಲೇವಾರಿ:ಇಲ್ಲಿಯವರೆಗೆ ಸುಮಾರು 1.70 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಉಗ್ರಾಣಗಳಿಂದ ವಿಲೇವಾರಿ ಮಾಡಲಾಗಿದೆ. ಈರುಳ್ಳಿ ಬೆಳೆಯುವ ರೈತರಿಗೆ ಲಾಭದಾಯಕ ಬೆಲೆ ಸಿಗುವುದರ ಜೊತೆಗೆ ಗ್ರಾಹಕರ ಕೈಸುಡದಂತೆ ಕ್ರಮ ವಹಿಸಲಾಗಿದೆ. ಹಿಂಗಾರು ಕೊರತೆಯಿಂದಲೂ ಖಾರಿಫ್ ಈರುಳ್ಳಿ ಬಿತ್ತನೆ ವಿಳಂಬವಾಗಿದೆ. ಕಡಿಮೆ ಉತ್ಪಾದನೆ ಮತ್ತು ಬೆಳೆ ತಡವಾಗಿ ಬರುವ ಕಾರಣ ಎಲ್ಲದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ:ಟೊಮೆಟೊ ಆಯ್ತು ಈಗ ಕಣ್ಣೀರು ತರಿಸ್ತಿದೆ ಈರುಳ್ಳಿ - ಗಗನಕ್ಕೇರುತ್ತಿರುವ ಬೆಲೆ..: 5 ಕೆಜಿಗೆ 350 ರೂ.. !