ಅಹಮದಾಬಾದ್ (ಗುಜರಾತ್):ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಬಿಡುಗಡೆ ಮಾಡಿದ್ದ ಫಾಲೋಆನ್ ಪಬ್ಲಿಕ್ ಆಫರ್(ಎಫ್ಪಿಒ) ಷೇರನ್ನು ಕಂಪನಿ ವಾಪಸ್ ಪಡೆದಿದೆ. "ಮಾರುಕಟ್ಟೆಯಲ್ಲಿ ತನ್ನ ಷೇರುಗಳು ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ವಾಪಸ್ ಪಡೆಯಲಾಗಿದೆ. ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡಲಾಗುವುದು ಎಂದು ಉದ್ಯಮಿ ಗೌತಮ್ ಅದಾನಿ ತಿಳಿಸಿದ್ದಾರೆ.
ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ಮೇಲೆ ನಕಾರಾತ್ಮಕ ವರದಿ ಭಿತ್ತರಿಸಿತ್ತು. ಇದರಿಂದ ಕಂಪನಿಯ ಷೇರುಗಳು ದಿಢೀರ್ ಕುಸಿತಗೊಂಡು ನಷ್ಟಕ್ಕೀಡಾಗಿವೆ. ಎಫ್ಪಿಒ ಖರೀದಿಗೆ ಹೂಡಿಕೆದಾರರು ಉತ್ತಮ ಪ್ರತಿಕ್ರಿಯೆ ತೋರಿದ್ದರು. ಆದರೆ, ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ಕುಸಿಯುತ್ತಿರುವ ಷೇರುಗಳ ಮಾರಾಟವನ್ನು ಕಂಪನಿ ತಡೆಹಿಡಿದಿದೆ.
"ಕಂಪನಿಯ ಷೇರುಗಳಲ್ಲಿ ಹೂಡಿಕೆದಾರರು ಮಾಡಿರುವ 20 ಸಾವಿರ ಕೋಟಿ ರೂ.ಯನ್ನು ವಾಪಸ್ ಮಾಡಲಾಗುವುದು. ಷೇರುಗಳ ಏರುಪೇರಿನ ಸ್ಥಿತಿಯಲ್ಲಿ ಎಫ್ಪಿಒ ಬಿಡುಗಡೆ ಮಾಡುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ಯೋಜನೆಯನ್ನು ರದ್ದು ಮಾಡಲಾಗಿದೆ. ಇದು ಭವಿಷ್ಯದ ಯಾವುದೇ ನಿರ್ಧಾರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಯೋಜನೆ ಸಕಾಲಿಕತೆಯ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು. ಕಂಪನಿಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ" ಎಂದು ಅದಾನಿ ಹೇಳಿದರು.
ಹೂಡಿಕೆದಾರರ ಹಿತಾಸಕ್ತಿ ಮುಖ್ಯ:ಎಫ್ಪಿಒ ಬಿಡುಗಡೆ ರದ್ದು ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಅದಾನಿ, "ಕಳೆದ ಕೆಲ ದಿನಗಳಿಂದ ಕಂಪನಿಯ ಷೇರುಗಳಲ್ಲಿನ ಏರಿಳಿತದಿಂದಾಗಿ ನಷ್ಟ ಉಂಟಾಗಿದೆ. ಆದಾಗ್ಯೂ ಹೂಡಿಕೆದಾರರು ನಂಬಿಕೆಯ ಆಧಾರದ ಮೇಲೆ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಆದರೆ, ಹೂಡಿಕೆದಾರರ ಹಿತಾಸಕ್ತಿಯ ಇಲ್ಲಿ ಅತಿಮುಖ್ಯವಾಗಿದೆ. ಸಂಭಾವ್ಯ ನಷ್ಟದಿಂದ ಅವರನ್ನು ರಕ್ಷಿಸಲು ಮಂಡಳಿಯು ಎಫ್ಪಿಒ ಯೋಜನೆಯನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ" ಎಂದರು.
"ಎಫ್ಪಿಒದಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಎಲ್ಲಾ ಹೂಡಿಕೆದಾರರಿಗೆ ಧನ್ಯವಾದ ಸಲ್ಲಿಸಿರುವ ಕಂಪನಿ, ನಮ್ಮ ಮೇಲಿರುವ ನಿಮ್ಮ ನಂಬಿಕೆ ಅಮೂಲ್ಯವಾದುದು. ಅದನ್ನು ಉಳಿಸಿಕೊಳ್ಳು ಪ್ರಯತ್ನಿಸಲಾಗುವುದು. ನಿಮ್ಮ ಹೂಡಿಕೆಗೆ ನಷ್ಟವಾಗಬಾರದು ಎಂಬ ಕಾರಣಕ್ಕಾಗಿ ಸದ್ಯದ ಪರಿಸ್ಥಿತಿಯಲ್ಲಿ ಎಫ್ಪಿಒ ಬಿಡುಗಡೆ ರದ್ದು ಮಾಡಲಾಗಿದೆ" ಎಂದು ತಿಳಿಸಿದರು.