ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ತಪ್ಪಾದ ವ್ಯಕ್ತಿಗೆ ಹಣ ಕಳುಹಿಸಿದರೆ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಒಂದಿಷ್ಟು ಮುಖ್ಯವಾದ ಮಾಹಿತಿ. ಸಾಮಾನ್ಯವಾಗಿ ಯುಪಿಐ ಪೇಮೆಂಟ್ಗಳು ಕ್ಷಣಾರ್ಧದಲ್ಲಿ ಮುಗಿದುಹೋಗುತ್ತವೆ ಮತ್ತು ಅವುಗಳನ್ನು ಹಿಂಪಡೆಯಲಾಗುವುದಿಲ್ಲ. ಆದಾಗ್ಯೂ ಕೆಲ ಪ್ರಕರಣಗಳಲ್ಲಿ ತಪ್ಪಾಗಿ ಕಳುಹಿಸಿದ ಮೊತ್ತವನ್ನು ಮರಳಿ ಕಳುಹಿಸಲು ಅಥವಾ ರಿಫಂಡ್ ಮಾಡಲು ನೀವು ಮನವಿ ಮಾಡಬಹುದು.
ಯುಪಿಐ ಪೇಮೆಂಟ್ ಮರಳಿ ಪಡೆಯುವ ಕೆಲ ವಿಧಾನಗಳು ಹೀಗಿವೆ:
ಹಣ ಪಡೆದವರನ್ನು ತಕ್ಷಣ ಸಂಪರ್ಕಿಸಿ:ನೀವು ತಪ್ಪು ವ್ಯಕ್ತಿಗೆ ಯುಪಿಐ ಪಾವತಿ ಮಾಡಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣ ಅವರನ್ನು ಸಂಪರ್ಕಿಸುವುದು ಮತ್ತು ನಿಮ್ಮ ಹಣವನ್ನು ಮರಳಿಸುವಂತೆ ಕೇಳುವುದು. ಹಣ ಪಡೆದವರು ಒಳ್ಳೆಯವರಾಗಿದ್ದರೆ ಅವರು ತಮ್ಮ ಕಡೆಯಿಂದ ಪೇಮೆಂಟ್ ಅನ್ನು ಹಿಮ್ಮುಖಗೊಳಿಸಬಹುದು.
ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪನಿಯನ್ನು ಸಂಪರ್ಕಿಸಿ:ಹಣ ಪಡೆದವರು ಹಣ ಮರಳಿಸಲು ಸಾಧ್ಯವಾಗದಿದ್ದರೆ ಅಥವಾ ಹಾಗೆ ಮಾಡಲು ಅವರು ಇಷ್ಟಪಡದಿದ್ದರೆ, ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಪೂರೈಕೆದಾರರನ್ನು ಸಂಪರ್ಕಿಸಬಹುದು. ನೀವು ಅವರಿಗೆ ವಹಿವಾಟು ಉಲ್ಲೇಖ ಸಂಖ್ಯೆ (ಯುಟಿಆರ್), ದಿನಾಂಕ ಮತ್ತು ವಹಿವಾಟಿನ ಮೊತ್ತ ಎಷ್ಟು ಎಂಬುದನ್ನು ತಿಳಿಸಬೇಕಾಗುತ್ತದೆ. ನಂತರ ಅವರು ನಿಮ್ಮ ಪರವಾಗಿ ಯುಪಿಐ ಆಟೋ-ರಿವರ್ಸಲ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.