ನವದೆಹಲಿ:ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಭೀಮ್ ಯುಪಿಐ ವಹಿವಾಟನ್ನು ಉತ್ತೇಜಿಸಲು 2,600 ಕೋಟಿ ರೂಪಾಯಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರುಪೇ ಮತ್ತು ಯುಪಿಐ ಬಳಸಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಇದರಡಿ ಆರ್ಥಿಕ ಪ್ರೋತ್ಸಾಹ ಸಿಗಲಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಇದರ ಉದ್ದೇಶ.
ಪ್ರಧಾನಿ ಮೋದಿ ಹೇಳಿದ್ದೇನು?:ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಭಾರತ ದಾಪುಗಾಲಿಡುತ್ತಾ ಸಾಗುತ್ತಿದೆ. ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ವ್ಯವಹಾರಗಳನ್ನು ಮತ್ತಷ್ಟು ಪ್ರಚುರಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
10 ದೇಶದ ಅನಿವಾಸಿಗಳಿಗೆ ಯುಪಿಐ ಅವಕಾಶ:ಡಿಜಿಟಲ್ ವ್ಯವಹಾರವಾದ ಯುಪಿಐ ಅನ್ನು ಇತರೆ ದೇಶಗಳಲ್ಲೂ ವಿಸ್ತರಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಅಮೆರಿಕ, ಕೆನಡಾ ಮತ್ತು ಯುಎಇ ಸೇರಿದಂತೆ 10 ದೇಶಗಳ ಅನಿವಾಸಿಗಳಿಗೆ ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಗಳಿಂದ ಯುಪಿಐ ಮೂಲಕ ಹಣದ ವರ್ಗಾವಣೆಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಎನ್‌ಪಿಸಿಐ ಅನುಮತಿ ನೀಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ನಲ್ಲಿ (ಯುಪಿಐ) ವಹಿವಾಟು ನಡೆಸಲು ಅನಿವಾಸಿಗಳಿಗೆ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಲು ಅವಕಾಶ ನೀಡುವಂತೆ ಕೋರಿಕೆಗಳನ್ನು ಸ್ವೀಕರಿಸುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸುತ್ತೋಲೆಯಲ್ಲಿ ತಿಳಿಸಿದೆ.
ಜನವರಿ 10 ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು ಏಪ್ರಿಲ್ 30ರೊಳಗೆ ಸೂಚಿತ ದೇಶಗಳ ಎನ್ಆರ್ಐಗಳು ಯುಪಿಐ ಮೂಲಕ ವ್ಯವಹಾರಕ್ಕೆ ಅವಕಾಶ ನೀಡಲಾಗುವುದು. ಅದರಂತೆ ಎನ್‌ಆರ್‌ಒ ಖಾತೆಗಳನ್ನು ಹೊಂದಿರುವ ಅನಿವಾಸಿಗಳು ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಹಣ ವರ್ಗಾಯಿಸಬಹುದಾಗಿದೆ. ಈ ಸೌಲಭ್ಯವು ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಗ್ಕಾಂಗ್, ಒಮನ್, ಕತಾರ್, ಅಮೆರಿಕ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಗ್ಲೆಂಡ್ ಅನಿವಾಸಿಗಳಿಗೆ ಲಭ್ಯವಿದೆ.
ಇದನ್ನೂ ಓದಿ:ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ನಡುವಿನ ಒಪ್ಪಂದ ಪೂರ್ಣ