ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಅದ್ಭುತ ಯಶಸ್ಸು ಸಾಧಿಸಿ, ದೇಶಕ್ಕೆ ಹೆಸರು ತಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2 ದಿನ ನಡೆದ ವಿಶ್ವ ನಾಯಕರಿದ್ದ ಸಭೆಗಾಗಿ ಸರ್ಕಾರ 2700 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಇಷ್ಟೆಲ್ಲದರ ನಡುವೆ ಸಂಕಷ್ಟ ಅನುಭವಿಸಿದ್ದು ಮಾತ್ರ ಶ್ರೀಸಾಮಾನ್ಯ. ಸಭೆಗಾಗಿ ಸರ್ಕಾರ 3 ದಿನ 'ಭಾರತ ಮಂಟಪ' ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಿಸಿದ್ದರಿಂದ ವ್ಯಾಪಾರ ವಹಿವಾಟು ನಡೆಯದೇ 400 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯ ಹಲವು ಪ್ರದೇಶಗಳನ್ನು ಸಂಚಾರ ಮತ್ತು ವ್ಯಾಪಾರವನ್ನು ಮೂರು ದಿನಗಳವರೆಗೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾರುಕಟ್ಟೆಗಳು ಮತ್ತು ಮಾಲ್‌ಗಳು ಭಾರಿ ನಷ್ಟವನ್ನು ಅನುಭವಿಸಿವೆ. ಮಾಧ್ಯಮ ವರದಿಯೊಂದರ ಪ್ರಕಾರ, ಅಂದಾಜು 400 ಕೋಟಿ ರೂಪಾಯಿ ನಷ್ಟವಾಗಿದೆ. ಸುಮಾರು 9 ಸಾವಿರ ವಿತರಣಾ ಕೆಲಸಗಾರರು ಇದರಿಂದ ತೊಂದರೆಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಬಿಕೋ ಎನ್ನುತ್ತಿದ್ದ ಅಂಗಡಿಗಳು :ದೆಹಲಿಯ ಪ್ರಗತಿ ಮೈದಾನದ ಸುತ್ತಮುತ್ತಲಿನ ಅಂಗಡಿಕಾರರು ಮಾತ್ರವಲ್ಲ, ಭದ್ರತಾ ಕಾರಣಗಳಿಗಾಗಿ ನಿಯಂತ್ರಿತ ಪ್ರದೇಶದ ಹೊರಗಿನ ಅನೇಕ ಅಂಗಡಿಗಳೂ ಅರ್ಧದಷ್ಟು ಮುಚ್ಚಿದ್ದವು. ಟ್ರಾಫಿಕ್ ಕಂಟ್ರೋಲ್ ಮಾಡಿದ್ದರಿಂದ ಜನರು ಹೊರಗೆ ಬರುವುದು ಕಡಿಮೆಯಾಗಿತ್ತು. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿದ್ದವು.
ನವದೆಹಲಿ ವರ್ತಕರ ಸಂಘದ ಅಧ್ಯಕ್ಷ ಅತುಲ್ ಭಾರ್ಗವ ಮಾತನಾಡಿ, ಮೂರು ದಿನಗಳಲ್ಲಿ ಇಲ್ಲಿನ ವ್ಯಾಪಾರಿಗಳು ಸುಮಾರು 300 ರಿಂದ 400 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ನಾವು ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದೆವು. ಭದ್ರತೆಯು ಪ್ರಧಾನವಾಗಿದ್ದರಿಂದ ಇದಕ್ಕೆ ಸಹಕರಿಸಿದೆವು. ದೇಶಕ್ಕೆ ಬಂದ ವಿಶ್ವದ ಅತಿಥಿಗಳು ಅಷ್ಟೇ ಗೌರವಯುತವಾಗಿ ಹಿಂತಿರುಗಬೇಕು ಎಂದು ನಾವೂ ಕೂಡ ಬೆಂಬಲಿಸಿದ್ದೇವೆ ಎಂದು ಅವರು ಹೇಳಿದರು.