ನವದೆಹಲಿ: ಕೇಂದ್ರ ಬಜೆಟ್ 2023-24ರ ಮಂಡನೆಗೆ ದಿನ ಹತ್ತಿರವಾಗುತ್ತಿದೆ. ಫೆಬ್ರವರಿ 1 ರಂದು ದೇಶದ ಆದಾಯ ಮತ್ತು ವೆಚ್ಚಗಳ ದಾಖಲೆಯಾದ ಕೇಂದ್ರೀಯ ಬಜೆಟ್ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ಅಧಿಕಾರಿಗಳ ತಂಡ ಹಗಲು ರಾತ್ರಿ ಎನ್ನದೇ ಸತತವಾಗಿ ಶ್ರಮಿಸುತ್ತಿದೆ. ಬಜೆಟ್ ತಯಾರಿಸುವುದರ ಹಿಂದೆ ಯಾರೆಲ್ಲ ಕೆಲಸ ಮಾಡುತ್ತಾರೆ? ಬಜೆಟ್ ತಯಾರಿಕೆಯ ಹಿಂದಿನ ಅತ್ಯಂತ ಪ್ರಮುಖ ಒಂಬತ್ತು ವ್ಯಕ್ತಿಗಳು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ: ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಅವರು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಅವರು ಕೊರೊನಾವೈರಸ್ ಸಾಂಕ್ರಾಮಿಕದ ಎರಡು ಬಿಕ್ಕಟ್ಟಿನ ವರ್ಷಗಳಲ್ಲಿ ಹಣಕಾಸು ಸಚಿವಾಲಯವನ್ನು ಮುನ್ನಡೆಸಿದ್ದಾರೆ ಮತ್ತು ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ಹಲವಾರು ಆರ್ಥಿಕ ಪರಿಹಾರ ಪ್ಯಾಕೇಜ್‌ಗಳನ್ನು ನೀಡಿದ್ದಾರೆ.
ಟಿ.ವಿ.ಸೋಮನಾಥನ್, ಹಣಕಾಸು ಕಾರ್ಯದರ್ಶಿ : ಇವರು ತಮಿಳುನಾಡು ಕೇಡರ್‌ನ 1987 ಬ್ಯಾಚ್‌ನ ಐಎಎಸ್ ಅಧಿಕಾರಿ. ಈ ಹಿಂದೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಮತ್ತು 2015 ರಿಂದ 2017 ರವರೆಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಜಂಟಿ ಕಾರ್ಯದರ್ಶಿಯಾಗಿದ್ದರು. ಇವರ ಅಡಿಯಲ್ಲಿ ಬಂಡವಾಳ ವೆಚ್ಚವು ಹೆಚ್ಚಿದೆ ಮತ್ತು ರಾಜ್ಯಗಳ ಕ್ಯಾಪೆಕ್ಸ್ ಅನ್ನು ಹೆಚ್ಚಿಸಲು ಪ್ರಯತ್ನಗಳು ಸಹ ನಡೆಯುತ್ತಿವೆ. ಸೋಮನಾಥನ್ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ ಮತ್ತು ಇವರೊಬ್ಬ ಚಾರ್ಟರ್ಡ್ ಅಕೌಂಟೆಂಟ್ (CA), ವೆಚ್ಚ ಲೆಕ್ಕಪರಿಶೋಧಕ ಮತ್ತು ಕಂಪನಿ ಕಾರ್ಯದರ್ಶಿಯೂ ಆಗಿದ್ದಾರೆ.
ಅಜಯ್ ಸೇಠ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ: ಕರ್ನಾಟಕ ಕೇಡರ್‌ನ 1987ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಇವರು ಹಣಕಾಸು ಸಚಿವರ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರು. ಎಲ್ಲಾ ಡೇಟಾವನ್ನು ಒಟ್ಟುಗೂಡಿಸುವ ಬಜೆಟ್ ವಿಭಾಗವು ಅವರ ಮೇಲ್ವಿಚಾರಣೆಯಲ್ಲಿದೆ. G20 ಕೇಂದ್ರ ಬ್ಯಾಂಕ್ ಮತ್ತು ಹಣಕಾಸು ಸಚಿವರ ಸಭೆಗಳ ಸಹ ಅಧ್ಯಕ್ಷತೆಯ ಹೆಚ್ಚುವರಿ ಜವಾಬ್ದಾರಿಯನ್ನು ಸೇಠ್ ಹೊಂದಿದ್ದಾರೆ.
ತುಹಿನ್ ಕಾಂತಾ ಪಾಂಡೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ : ತುಹಿನ್ ಕಾಂತಾ ಪಾಂಡೆ ಅವರ ಮೇಲ್ವಿಚಾರಣೆಯಲ್ಲಿ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆ ನಡೆದಿದೆ. ಸಂಜಯ್ ಮಲ್ಹೋತ್ರಾ, ಕಂದಾಯ ಕಾರ್ಯದರ್ಶಿ : ರಾಜಸ್ಥಾನ ಕೇಡರ್‌ನ 1990ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಸಂಜಯ್ ಮಲ್ಹೋತ್ರಾ ಅವರನ್ನು ಇತ್ತೀಚೆಗೆ ಹಣಕಾಸು ಸೇವೆಗಳ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಆದಾಯದ ನಿರೀಕ್ಷೆಗಳನ್ನು ಸಮತೋಲನಗೊಳಿಸುವ ಪ್ರಯಾಸಕರ ಕೆಲಸದ ಜವಾಬ್ದಾರಿ ಇವರ ಮೇಲಿದೆ.