ಕರ್ನಾಟಕ

karnataka

ETV Bharat / business

ನಿರ್ಮಲಾ ಸೀತಾರಾಮನ್​ ಬಜೆಟ್​ನಲ್ಲಿ ಏನೇನು ಕೊಡುಗೆ ನೀಡಬಹುದು? - 11 ಗಂಟೆಗೆ ಬಜೆಟ್​ ಭಾಷಣ

ಇಂದು 11 ಗಂಟೆಗೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್​ ಮಂಡನೆ ಮಾಡಲಿದ್ದಾರೆ. ಅವರ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ಇದೆ.

Budget 2023: Nirmala Sitharaman will present
ನಿರ್ಮಲಾ ಸೀತಾರಾಮನ್​ ಬಜೆಟ್​ನಲ್ಲಿ ಏನೇನು ಕೊಡುಗೆ ನೀಡಬಹುದು

By

Published : Feb 1, 2023, 9:22 AM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಬಜೆಟ್​ ಮಂಡನೆ ಮಾಡಲಿದ್ದಾರೆ. ಈಗಾಗಲೇ ಆರ್ಥಿಕ ಸಮೀಕ್ಷೆಯನ್ನು ಸಂಸತ್​​ನಲ್ಲಿ ಮಂಡನೆ ಮಾಡಲಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ 6.8 ಎಂದು ಅಂದಾಜಿಸಲಾಗಿದೆ.

ಆದಾಯ ತೆರಿಗೆಯಲ್ಲಿ ಸಿಗುತ್ತಾ ವಿನಾಯಿತಿ:ಇಂದಿನ ಬಜೆಟ್​​ನಲ್ಲಿ ಏನೇನು ಇರಬಹುದು ಎಂಬುದನ್ನು ನೋಡುವುದಾದರೆ, ಭಾರತದ ಮಧ್ಯಮ ವರ್ಗ ನಿರ್ಮಲಾ ಸೀತಾರಾಮನ್​ ಅವರ ಬಜೆಟ್​ ಮೇಲೆ ಕಣ್ಣಿಟ್ಟಿದೆ. ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದಾ ಎಂಬ ಬಗ್ಗೆ ಕಾತರವಾಗಿದೆ. ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸದಿದ್ದರೂ ಮತ್ತು ಕಳೆದ ವರ್ಷ ಯಾವುದೇ ಹೊಸ ಕಡಿತವನ್ನು ಘೋಷಿಸದಿದ್ದರೂ, ಹಣದುಬ್ಬರವು ಜನರ ಆದಾಯಕ್ಕೆ ಕನ್ನ ಹಾಕುತ್ತಲೇ ಸಾಗಿದೆ. ಇನ್ನು ಕಳೆದ 9 ವರ್ಷಗಳಿಂದ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂಬುದು ಗಮನಾರ್ಹ. ಹೀಗಾಗಿ ಎಲ್ಲರ ಕಣ್ಣು ಇದೇ ವಿಚಾರದ ಮೇಲಿದೆ.

ಮೋದಿ ಸರ್ಕಾರದ ಕೊನೆಯ ಸಂಪೂರ್ಣ ಬಜೆಟ್​: ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಇದು ನಿರ್ಮಲಾ ಸೀತಾರಾಮನ್​ ಅವರ ಕೊನೆಯ ಪೂರ್ಣ ಪ್ರಮಾಣದ ಬಜೆಟ್​ ಆಗಿರಲಿದೆ. ಹೀಗಾಗಿ ಈ ಬಾರಿ ಸೀತಾರಾಮನ್​ ಅವರ ಆಯವ್ಯಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿ ಸಮತೋಲಿತ ಬಜೆಟ್​ ಮಂಡನೆ ಆಗುವ ಸಾಧ್ಯತೆ ಇದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸತತ ಮೂರನೇ ಬಾರಿಗೆ ಗೆಲ್ಲುವ ಭರವಸೆಯೊಂದಿಗೆ, ರೈತರು ಮತ್ತು ಗ್ರಾಮೀಣ ಜನರಿಗಾಗಿ ಬೃಹತ್ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಣೆ ಮಾಡ ಬಹುದು ಎಂದು ನಂಬಲಾಗಿದೆ.

ಆದಾಯ ತೆರಿಗೆಯಲ್ಲಿ ಕೆಲ ವಿನಾಯಿತಿಗಳ ಘೋಷಣೆ ಸಾಧ್ಯತೆ:ಜೀವ ವಿಮೆ, ನಿಶ್ಚಿತ ಠೇವಣಿ, ಬಾಂಡ್‌ಗಳು, ವಸತಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆಯನ್ನು ಒಳಗೊಂಡಿರುವ 80C ಅಡಿಯಲ್ಲಿ ಮಿತಿಯನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಪರಿಗಣಿಸಿತ್ತು. ಇಂದು ಈ ಬಗ್ಗೆ ಘೋಷಣೆ ಮಾಡಿದಲ್ಲಿ, ಇದು ಆದಾಯ ತೆರಿಗೆದಾರರಿಗೆ ರಿಲೀಫ್​ ನೀಡಲಿದೆ. ಹಾಗೂ ಉಳಿತಾಯಕ್ಕೂ ಉತ್ತೇಜನ ನೀಡಲಿದೆ. COVID-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೂಡಿಟ್ಟ ಹಣ ಖರ್ಚಾಗಿರುವುದರಿಂದ ಅದನ್ನು ಸಂಗ್ರಹ ಮಾಡಲು ಈ ಕ್ರಮ ನೆರವಿಗೆ ಬರುವ ಸಾಧ್ಯತೆ ಇದೆ.

11 ಗಂಟೆಗೆ ಬಜೆಟ್​ ಭಾಷಣ:ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ತಮ್ಮ ಬಜೆಟ್ ಭಾಷಣವನ್ನು ಪ್ರಾರಂಭಿಸಲಿದ್ದಾರೆ. ಇದು ಉದ್ಯಮ ಹಾಗೂ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಾನಿ ಗ್ರೂಪ್ ಕಂಪನಿಗಳು ಕಳೆದ ವಾರ ಹೆಚ್ಚಿನ ಏರಿಳಿತಗಳಿಗೆ ಕಾರಣವಾಗಿದೆ. ಆದರೆ, ಮಂಗಳವಾರ ₹ 20,000 ಕೋಟಿ ಫಾಲೋ-ಆನ್ ಷೇರು ಮಾರಾಟವನ್ನು ಕಂಪನಿ ಯಶಸ್ವಿ ಮಾಡಿ ಮುಗಿಸಿದೆ.

ವಿದೇಶಿ ಉದ್ಯಮಗಳನ್ನು ಆಕರ್ಷಿಸಲು ವಿಶೇಷ ಕ್ರಮ ಸಾಧ್ಯತೆ:ಮೋದಿ ಸರ್ಕಾರವು ತನ್ನ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನೀತಿಗಳನ್ನು ದೇಶದಲ್ಲಿ ಸ್ಥಾಪಿಸಲು ಬಯಸುವ ತಯಾರಕರು ಮತ್ತು ಪೂರೈಕೆದಾರರಿಗೆ ಈ ಬಾರಿಯ ಬಜೆಟ್​ನಲ್ಲಿ ಆರ್ಥಿಕ ಪ್ರಯೋಜನಗಳನ್ನು ನೀಡುವ ಮೂಲಕ ಬಲಪಡಿಸಬಹುದು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಚೀನಾಕ್ಕೆ ಪರ್ಯಾಯವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆರಂಭಿಸಿದೆ. ಹೀಗಾಗಿ ಭಾರತ ಹೊಸ ಉದ್ಯಮಗಳನ್ನು ಆಕರ್ಷಿಸುವಲ್ಲಿ ತೊಡಗಿಸಿಕೊಂಡಿದೆ.

ರಿಯಲ್​ ಎಸ್ಟೇಟ್​ ಉದ್ಯಮ ಚೇತರಿಕೆಗೆ ಸಿಗಲಿದೆಯಾ ಮನ್ನಣೆ?:ಸಾಂಕ್ರಾಮಿಕ ಸಮಯದಲ್ಲಿ ತೀರಾ ಕೆಳ ಹಂತಕ್ಕೆ ಕುಸಿದಿದ್ದ ರಿಯಲ್ ಎಸ್ಟೇಟ್ ಕ್ಷೇತ್ರವು ಕಳೆದ ವರ್ಷ ದಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಹೀಗಾಗಿ ಈ ಕ್ಷೇತ್ರವನ್ನು ಸುಧಾರಿಸಲು ಅನುಕೂಲಕರ ಯೋಜನೆಗಳು ಮತ್ತು ತೆರಿಗೆ ವಿನಾಯಿತಿಗಳನ್ನು ಘೋಷಿಸುವ ನಿರೀಕ್ಷೆ ಇದೆ. 2019 ರಲ್ಲಿ ಸರಕು ಮತ್ತು ಸೇವಾ ತೆರಿಗೆ, ಅಥವಾ ಜಿಎಸ್‌ಟಿ ಯಲ್ಲಿ ಶೇಕಡಾ 8 ರಿಂದ ಶೇಕಡಾ 1 ಕ್ಕೆ ಇಳಿಸಿತ್ತು. ಈ ಬಾರಿಯ ಬಜೆಟ್‌ನಲ್ಲಿಯೂ ಇದೇ ರೀತಿಯ ಘೋಷಣೆಗಳನ್ನು ಈ ವಲಯ ನಿರೀಕ್ಷಿಸುತ್ತಿದೆ.

ಉದ್ಯೋಗದ ಭರವಸೆ ನೀಡುವ ನಿರೀಕ್ಷೆ:ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರಿಗೆ ಉದ್ಯೋಗ ಭದ್ರತೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಯುವ ಜನತೆ ಹೆಚ್ಚಾಗಿ ಎಲೆಕ್ಟ್ರಾನಿಕ್ ಸರಕುಗಳನ್ನು ಅವರು ಖರೀದಿಸಲು ಆದ್ಯತೆ ನೀಡುವ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಗೊಳಿಸುವುದರ ಮೇಲೆ ಕೇಂದ್ರೀಕರಿಸುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣಕ್ಕಾಗಿ ಇತರ ರೀತಿಯ ಹಣಕಾಸಿನ ಸಹಾಯದ ನಿರೀಕ್ಷೆಯಲ್ಲಿ ಶಿಕ್ಷಣ ವಲಯ ಕಾತರದಿಂದ ಕಾಯುತ್ತಿದೆ.

ಇದನ್ನು ಓದಿ:ಕೇಂದ್ರ​ ಬಜೆಟ್ 2023: 1860 ರಿಂದ ಇಲ್ಲಿಯವರೆಗಿನ ಬಜೆಟ್​ ಇತಿಹಾಸ

ABOUT THE AUTHOR

...view details