ನವದೆಹಲಿ: ಭಾರತದ ಪ್ರಖ್ಯಾತ ಲಾಜಿಸ್ಟಿಕ್ಸ್ ಕಂಪನಿ ಬ್ಲೂಡಾರ್ಟ್ ತನ್ನ ಭಾರತದಲ್ಲಿನ ಪ್ರೀಮಿಯಂ ಸೇವೆಗಳ ವಿಭಾಗದ ಹೆಸರನ್ನು ಭಾರತ್ ಪ್ಲಸ್ ಎಂದು ಬದಲಾಯಿಸಿದೆ. ಇದು ಮೊದಲು ಡಾರ್ಟ್ ಪ್ಲಸ್ ಎಂದಾಗಿತ್ತು. ಈ ಕುರಿತು ಬಿಎಸ್ಇ ಗೆ ಸಲ್ಲಿಸಿರುವ ಫೈಲಿಂಗ್ನಲ್ಲಿ ಕಂಪನಿ ಮಾಹಿತಿ ನೀಡಿದೆ. "ಕಂಪನಿಯ ಕಾರ್ಯತಂತ್ರದ ಭಾಗವಾಗಿ ಮಾಡಿರುವ ಈ ಬದಲಾವಣೆಯು ಬ್ಲೂ ಡಾರ್ಟ್ನ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸೂಚಿಸುತ್ತದೆ. ಇದು ಭಾರತದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಹೊಂದಿಕೊಳ್ಳಲು ವ್ಯಾಪಕ ಸಂಶೋಧನೆಗಳನ್ನು ಮಾಡಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. "ಬ್ಲೂ ಡಾರ್ಟ್ ಎಕ್ಸ್ಪ್ರೆಸ್ ಲಿಮಿಟೆಡ್ ಭಾರತವನ್ನು ಜಗತ್ತಿನೊಂದಿಗೆ ಮತ್ತು ಜಗತ್ತನ್ನು ಭಾರತದೊಂದಿಗೆ ಸಂಪರ್ಕಿಸುವುದನ್ನು ಮುಂದುವರಿಸುತ್ತಿರುವುದರಿಂದ ಈ ಪರಿವರ್ತನಾತ್ಮಕ ಪ್ರಯಾಣದಲ್ಲಿ ಸೇರಲು ಎಲ್ಲಾ ಮಧ್ಯಸ್ಥಗಾರರನ್ನು ಆಹ್ವಾನಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಿ 20 ಪ್ರತಿನಿಧಿಗಳಿಗೆ ಕಳುಹಿಸಲಾದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ಉಲ್ಲೇಖಿಸಿದ ನಂತರ ದೇಶದಲ್ಲಿ ಸಾಕಷ್ಟು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಜಿ20 ಡಿಕ್ಲೆರೇಶನ್ ಸಮಯದಲ್ಲಿ ಪ್ರಧಾನಿ ಮೋದಿ ಅವರ ಮುಂದೆ ಇಂಡಿಯಾ ಬದಲಿಗೆ ಭಾರತ ಎಂದು ಬೋರ್ಡ್ ಇಡಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ಬದಲಾಯಿಸಿ ಭಾರತ ಎಂದು ಮಾಡಲು ಹೊರಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಬ್ಲೂಡಾರ್ಟ್ ತನ್ನ ಪ್ರೀಮಿಯಂ ಸೇವೆಗಳ ವಿಭಾಗವನ್ನು ಭಾರತ ಡಾರ್ಟ್ ಎಂದು ಹೆಸರಿಸಿರುವುದು ಗಮನಾರ್ಹವಾಗಿದೆ.